ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಕುರಿತು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿರುವ ದೆಹಲಿಯ ಸೆಂಟ್ರಲ್ ಪಾಲಿಸಿ ರೀಸರ್ಚ್(ಸಿಪಿಆರ್) ಇದೀಗ ವರದಿಯನ್ನು ಅಂತಿಮಗೊಳಿಸಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲು ಮುಂದಾಗಿದೆ.
ಷರತ್ತುಗಳ ಉಲ್ಲಂಘನೆಯೇ ಹೆಚ್ಚು :
ಚತುಷ್ಪಥ ಕಾಮಗಾರಿ ಕೈಗೊಳ್ಳುವ ಪೂರ್ವದಲ್ಲಿ ಗುತ್ತಿಗೆ ಪಡೆದ ಐಆರ್ಬಿ ಕಂಪನಿಯು ಸಂಬಂಧಪಟ್ಟ ಹಲವು ಇಲಾಖೆಗಳಿಂದ ಪರವಾನಿಗೆ ಪಡೆಯಬೇಕು. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸಬೇಕು. ಆದರೆ, ಅಧ್ಯಯನ ವರದಿ ಮೂಲಕ ಶೇ. 80 ರಷ್ಟು ನಿಯಮಗಳು ಹಾಗೂ ಷರತ್ತುಗಳು ಉಲ್ಲಂಘನೆಯಾಗಿರುವುದು ತಿಳಿದು ಬಂದಿದೆ.
ಪರಿಸರ ಅನುಮತಿಯಲ್ಲಿ ವಿಧಿಸಿರುವ 31 ಸಾಮಾನ್ಯ ಅನುಮತಿಗಳಲ್ಲಿ ಕೇವಲ 6ನ್ನು ಮಾತ್ರ ಪಾಲಿಸಲಾಗಿದೆ. 17 ನಿರ್ಧಿಷ್ಟ ನಿಯಮಾವಳಿಗಳಲ್ಲಿ ಒಂದನ್ನು ಮಾತ್ರ ಪಾಲಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ 37 ನಿಯಮಗಳ ಪೈಕಿ 13ರನ್ನು ಮಾತ್ರ ಪಾಲಿಸಲಾಗಿದೆ. ಗಣಿಗಾರಿಕೆಯ 17 ಪರವಾನಿಗೆಯಲ್ಲಿ ಕೇವಲ 7ಅನ್ನು ಮಾತ್ರ ಪಾಲಿಸಲಾಗಿದೆ ಎಂದು ವರದಿಯಲ್ಲಿ ಲೆಕ್ಕ ಹಾಕಲಾಗಿದೆ.
ಐಆರ್ಬಿ ಕಂಪನಿ ಅನುಮತಿ ಪಡೆಯದೆ ನಡೆಸಿರುವ ಕಾಮಗಾರಿ ಅನುಮತಿ ಪಡೆಯದೆ ಕಾಮಗಾರಿ:
ಹೆದ್ದಾರಿ ಕಾಮಗಾರಿ ವೇಳೆ, ಗುಡ್ಡೆ ಹಾಗೂ ಕಲ್ಲು ಬಂಡೆಗಳ ತೆರವಿಗೆ ಬೃಹತ್ ಸ್ಪೋಟಕಗಳನ್ನು ಬಳಸಲಾಗುತ್ತಿದೆ. ಆದರೆ, ಹೀಗೆ ಬಳಸಬೇಕಾದರೆ ವನ್ಯಜೀವಿ ಮಂಡಳಿಯ ಅನುಮತಿ ಪಡೆಯಬೇಕೆಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಲಾಗಿದೆ. ಇದಲ್ಲದೆ ಬೋರ್‌ವೆಲ್ ತೆಗೆಯಲು, ನದಿ ನೀರು ಬಳಕೆಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ.
ಹೆದ್ದಾರಿಗಾಗಿ ಭೂಮಿಯನ್ನು ನೀಡಿದವರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಲ್ಲಿ ವ್ಯವಸ್ಥೆ ಮಾಡಿಲ್ಲ. ಅಲ್ಲದೆ ಬಂದ ದೂರುಗಳನ್ನು ನಿಗದಿತ ನಮೂನೆಯಲ್ಲಿ ದಾಖಲಿಸಬೇಕು. ಕಾಲಕಾಲಕ್ಕೆ ಪರಿಸರ ಇಲಾಖೆಗೆ ಈ ವರದಿ ನೀಡಬೇಕೆಂಬ ನಿಯಮವಿದೆ. ಆದರೆ, ಇದಾವುದನ್ನೂ ಮಾಡದೆ ಐಆರ್ಬಿ ಕಂಪನಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ವರದಿಯಲ್ಲಿ ಹೇಳಿದೆ.
ಅಧ್ಯಯನ ತಂಡದಲ್ಲಿದ್ದ ಮಹಾಬಳೇಶ್ವರ ಹೆಗಡೆ ಮಾತನಾಡಿ, ಸಿಆರ್ಪಿ ಅಧ್ಯಯನ ವರದಿಯಂತೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ನಿಯಮಗಳು ಹೆಚ್ಚಾಗಿ ಉಲ್ಲಂಘನೆಯಾಗಿರುವುದು ತಿಳಿದುಬರುತ್ತಿದೆ. ಪ್ರಮುಖವಾಗಿ ಕಾಮಗಾರಿ ವೇಳೆ ನೈಸರ್ಗಿಕವಾಗಿ ಹರಿಯುವ ತೊರೆ, ಝರಿ ಹಳ್ಳಗಳಿರುವಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕಿದೆ. ಆದರೆ, ಇಲ್ಲಿ ಅಂತಹ ಯಾವುದೇ ಕೆಲಸವಾಗಿಲ್ಲ. 600 ಎಕರೆಯಷ್ಟು ಕೃಷಿ ಭೂಮಿಗೆ ನೆರೆಹಾವಳಿ ಬಂದು ತೊಂದರೆಯಾಗಿದೆ. ಜಲ್ಲಿಯನ್ನು ಪುಡಿಮಾಡಲು ದೊಡ್ಡ ಕ್ರಷರ್ಗಳನ್ನು ಜನವಸತಿ ಪ್ರದೇಶದಲ್ಲಿ ಮಾಡಿರುವುದು ಅಧ್ಯಯನ ವರದಿಯಲ್ಲಿ ತಿಳಿದುಬಂದಿದೆ ಎಂದು ಹೇಳಿದರು.