ಕರ್ನಾಟಕ

karnataka

ETV Bharat / state

ಮಕ್ಕಳಿಗೆ ಕೋವಿಡ್ ಲಸಿಕೆ: ಉತ್ತರ ಕನ್ನಡ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ - ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಉತ್ತರ ಕನ್ನಡ ಜಿಲ್ಲಾಡಳಿತದಿಂದ ಸಿದ್ಧತೆ

ಕೇಂದ್ರ ಸರ್ಕಾರ ಜ.3ರಿಂದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಗೂ ಆದ್ಯತಾ ವಲಯದವರಿಗೆ ಬೂಸ್ಟರ್ ಡೋಸ್ ನೀಡಲು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ವಿತರಣೆಗಾಗಿ ಉತ್ತರ ಕನ್ನಡ ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

Uttara Kannada DC Mullai Mugilan
ಮುಲ್ಲೈ ಮುಗಿಲನ್ - ಜಿಲ್ಲಾಧಿಕಾರಿ

By

Published : Dec 29, 2021, 1:08 PM IST

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಏಕಾಏಕಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲಿಯೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ವಸತಿ ಶಾಲೆಗಳು ಕೊರೊನಾ ಕ್ಲಸ್ಟರ್‌ಗಳಾಗುವ ಆತಂಕ ಎದುರಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಶೇ.0.28ಕ್ಕೆ ತಲುಪಿದ್ದ ಕೋವಿಡ್​​ ಪಾಸಿಟಿವಿಟಿ ದರ ಕಳೆದ ಒಂದು ವಾರದಲ್ಲೇ ಏರಿಕೆಯಾಗಿ 0.75ಕ್ಕೆ ತಲುಪಿದೆ. ಸದ್ಯ 121 ಸಕ್ರಿಯ ಪ್ರಕರಣಗಳಿದ್ದು, ನಿತ್ಯ 20ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ.


ಜಿಲ್ಲೆಯ ಸಿದ್ದಾಪುರದ ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾದ ಬಳಿಕ, ಜೊಯಿಡಾ ತಾಲೂಕಿನ ರಾಮನಗರದ ರಾಣಿ ಚೆನ್ನಮ್ಮ ವಸತಿ ಶಾಲೆಯ 60 ವಿದ್ಯಾರ್ಥಿನಿಯರ ಪೈಕಿ 19 ವಿದ್ಯಾರ್ಥಿನಿಯರಲ್ಲಿ ಸೋಂಕು ಪತ್ತೆಯಾಗಿತ್ತು. ಈಗ 30 ವಿದ್ಯಾರ್ಥಿಗಳಿಗೆ ವ್ಯಾಪಿಸಿದೆ. ಈ ನಿಟ್ಟಿನಲ್ಲಿ ವಸತಿ ಶಾಲೆಯನ್ನ ಕೊರೊನಾ ಕ್ಲಸ್ಟರ್ ಎಂದು ಘೋಷಣೆ ಮಾಡಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

ಇನ್ನುಳಿದಂತೆ ಶಾಲೆ, ಕಾಲೇಜು ಹಾಗೂ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಮುಂಜಾಗ್ರತೆ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಈಗಾಗಲೇ ಶಿಕ್ಷಣ ಇಲಾಖೆಯೊಂದಿಗೆ ಸಭೆ ನಡೆಸಿ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕೊರೊನಾ ಮುಂಜಾಗ್ರತಾ ಕ್ರಮ ಪಾಲಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಕೇಂದ್ರ ಸರ್ಕಾರ ಜ.3ರಿಂದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಗೂ ಆದ್ಯತಾ ವಲಯದವರಿಗೆ ಬೂಸ್ಟರ್ ಡೋಸ್ ನೀಡಲು ಘೋಷಿಸಿದೆ. ಈ ಹಿನ್ನೆಲೆ ಲಸಿಕೆ ವಿತರಣೆಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಜಿಲ್ಲೆಯಲ್ಲಿ 15 ರಿಂದ 18 ವರ್ಷದ 70 ಸಾವಿರದಿಂದ 75 ಸಾವಿರ ಮಕ್ಕಳಿದ್ದಾರೆ ಎಂದು ಅಂದಾಜಿಸಲಾಗಿದೆ.

ಆದ್ಯತಾ ವಲಯದಲ್ಲಿರುವ 77,302 ಮಂದಿಗೆ ಲಸಿಕೆ ನೀಡಲಾಗುತ್ತದೆ. ಇವರಲ್ಲಿ 15,284 ಆರೋಗ್ಯ ಕಾರ್ಯಕರ್ತರು, 10,997 ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲಿನ, ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 51,021 ಮಂದಿ ಸೇರಿದ್ದಾರೆ.‌

ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ, 60 ವರ್ಷಕ್ಕಿಂತ ಮೇಲಿನವರಿಗೆ ಜ.10 ರಿಂದ ಬೂಸ್ಟರ್ ಡೋಸ್ ಕೊಡಲಾಗುವುದು. ಅದೇ ರೀತಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರಿಗೂ ಲಸಿಕೆ ನೀಡಲಾಗುತ್ತದೆ ಎಂದು ಆರ್​​ಸಿಹೆಚ್​​ಒ ಡಾ.ರಮೇಶ ರಾವ್ ತಿಳಿಸಿದ್ದಾರೆ.

ಇದನ್ಣೂ ಓದಿ:ಚಾಮರಾಜನಗರಕ್ಕೆ ಮತ್ತೆ ಡಿಸಿಯಾಗಿ ಬರಲಿದ್ದಾರಾ ಡಾ.ಎಂ.ಆರ್.ರವಿ?

ABOUT THE AUTHOR

...view details