ಕರ್ನಾಟಕ

karnataka

ETV Bharat / state

ಉ.ಕ ನಿಯಂತ್ರಣಕ್ಕೆ ಬರುತ್ತಿರುವ ಮಹಾಮಾರಿ: ಶೇ. 12 ರಷ್ಟಿದ್ದ ಕೋವಿಡ್​ ಪ್ರಕರಣ ಶೇ.2 ಕ್ಕೆ ಇಳಿಕೆ - Decrease in number of Covid infections in Uttara Kannada

ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕಿತರು ಕಂಡು ಬಂದ ಹಿನ್ನೆಲೆ, ಕೆಲ ಜಿಲ್ಲೆಗಳೊಂದಿಗೆ ಉತ್ತರ ಕನ್ನಡ ಕೂಡ ಕೋವಿಡ್​ ಹಾಟ್​ ಸ್ಪಾಟ್​ ಆಗಿ ಗುರುತಿಸಿಕೊಂಡಿತ್ತು. ಆದರೆ, ಈಗ ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು, ಜಿಲ್ಲೆಯ ಜನ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

Covid cases Decrease in Uttara Kannada
ಉತ್ತರ ಕನ್ನಡದಲ್ಲಿ ಕೋವಿಡ್​ ಪ್ರಮಾಣ ಇಳಿಕೆ

By

Published : Oct 26, 2020, 7:14 PM IST

ಕಾರವಾರ:ಸೋಂಕಿತರ ಸಂಖ್ಯೆ ಶೇ.12 ರಕ್ಕೆ ತಲುಪಿ ಕೋವಿಡ್ ಹಾಟ್​ ಸ್ಪಾಟ್​ ಎಂದು ಗುರುತಿಸಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ, ಇದೀಗ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಶೇ.2 ಕ್ಕೆ ತಲುಪಿದೆ. ​

ಆರಂಭದಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕಿತರು ಕಂಡು ಬಂದ ಹಿನ್ನೆಲೆ, ಕೆಲ ಜಿಲ್ಲೆಗಳೊಂದಿಗೆ ಉತ್ತರ ಕನ್ನಡ ಕೂಡ ಕೋವಿಡ್​ ಹಾಟ್​ ಸ್ಪಾಟ್​ ಆಗಿ ಗುರುತಿಸಿಕೊಂಡಿತ್ತು. ಮಧ್ಯೆ ಒಂದೆರಡು ತಿಂಗಳು ಸ್ವಲ್ಪ ಇಳಿಕೆಯಾದಂತೆ ಕಂಡರೂ, ಮತ್ತೆ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿ ಜಿಲ್ಲೆಯನ್ನು ಮತ್ತೆ ಹಾಟ್‌ಸ್ಪಾಟ್ ಮಾಡಿತ್ತು. ಈ ಅವಧಿಯಲ್ಲಿ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಈಗ ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು, ಜಿಲ್ಲೆಯ ಜನ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 1,49,183 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ 100 ಜನರನ್ನು ತಪಾಸಣೆಗೆ ಒಳಪಡಿಸಿದರೆ, ಕನಿಷ್ಠ 12 ಮಂದಿಗೆ ಸೋಂಕು ದೃಢಪಡುವ ಮೂಲಕ ಸೋಂಕಿನ ಪ್ರಮಾಣ ಶೇ 12ಕ್ಕೆ ತಲುಪಿತ್ತು. ಪ್ರತಿ ದಿನ 250 ಕ್ಕೂ ಹೆಚ್ಚು ಜನರಿಗೆ ಪಾಟಿಸಿವ್ 7ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿದ್ದವು. ಈ ಪ್ರಮಾಣದಲ್ಲಿ ಈಗ ಗಣನೀಯವಾಗಿ ಇಳಿಕೆಯಾಗುತ್ತಿದೆ. ನಿತ್ಯ 100ರ ಒಳಗೆ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಜೊತೆಗೆ, ಕೆಲವೊಂದು ತಾಲೂಕುಗಳಲ್ಲಿ ವಾರಗಟ್ಟಲೆ ಪ್ರಕರಣಗಳೇ ಪತ್ತೆಯಾಗಿಲ್ಲ.

ಈಗ, ಅತೀ ಕಡಿಮೆ ಕೋವಿಡ್​ ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳ ಪೈಕಿ ಉತ್ತರ ಕನ್ನಡ 3ನೇ ಸ್ಥಾನದಲ್ಲಿದೆ. ಬೀದರ್ ಮತ್ತು ಗದಗ ಶೇ.1 ರಷ್ಟು ಪ್ರಕರಣಗಳ ಮೂಲಕ ಮೊದಲ ಎರಡು ಸ್ಥಾನಗಳಲ್ಲಿದೆ. ಜಿಲ್ಲೆಯಲ್ಲಿ ಅಕ್ಟೋಬರ್ 25 ರವರೆಗೆ 12,596 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 11,393 ಮಂದಿ, ಅಂದರೆ ಶೇ 90 ರಷ್ಟು ಸೋಂಕಿತರು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸದ್ಯ, 1,043 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 160 ಮಂದಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲೆಗೆ ನೀಡಿದ ಕೋವಿಡ್ ಪರೀಕ್ಷಾ ಗುರಿ ಮೀರಿ ಸಾಧನೆ ಮಾಡಲಾಗಿದೆ. ಅದರಲ್ಲೂ ಆ್ಯಂಟಿಜೆನ್ ರ‍್ಯಾಪಿಡ್‌ಗಿಂತ ಆರ್‌ಟಿ - ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಿರುವುದು ವಿಶೇಷವಾಗಿದೆ. ಶೇ 90 ರಷ್ಟು ಸೋಂಕಿತರು ಗುಣಮುಖರಾಗಿರವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ, ಸಾಲು ಸಾಲಾಗಿ ಹಬ್ಬಗಳು ಬರುತ್ತಿರುವ ಹಿನ್ನೆಲೆ, ಸಾರ್ವಜನಿಕರು ಕೋವಿಡ್‌ನ ಎಲ್ಲ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಅನುಸರಿಸಬೇಕು. ನಿರ್ಲಕ್ಷಿಸಿದ್ದಲ್ಲಿ ದೊಡ್ಡ ಗಂಡಾಂತರಕ್ಕೆ ನಾವೇ ದಾರಿ ಮಾಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details