ಭಟ್ಕಳ: ಕೋವಿಡ್-19, ಮಂಗನ ಕಾಯಿಲೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಅಕಾಲಿಕ ಮಳೆಯ ಹಾನಿಗೆ ಸಂಬಂಧಿಸಿದಂತೆ ಭಟ್ಕಳದಲ್ಲಿ ಶಾಸಕರು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರನ್ನೊಳಗೊಂಡ ಅಧಿಕಾರಿಗಳ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ನಡೆಸಲಾಯಿತು.
ಭಟ್ಕಳ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದೆ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿಸ ಸಚಿವ ಹೆಬ್ಬಾರ್, ಸಭೆಯಲ್ಲಿನ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದುಕೊಂಡಿದ್ದು, ಕೃಷಿ, ಮೀನುಗಾರಿಕೆ, ಕೃಷಿ ಸಂಬಂಧಿತಹ ಚಟುವಟಿಕೆಗಳು, (ಅಡಿಕೆ, ಗೇರು, ಕೊಬ್ಬರಿ), ಅಕ್ಕಿ ಮಿಲ್, ಹಿಟ್ಟಿನ ಗಿರಣಿ, ಪಂಚರ್ ಅಂಗಡಿ, ಮಿಕ್ಸಿ ರಿಪೇರಿ, ಟಿವಿ ರಿಪೇರಿ, ಗ್ಯಾರೇಜ್‍ಗಳನ್ನು ತೆರೆಯಲು ನೀಡುವ ಅವಕಾಶದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಗ್ರಾಮೀಣ ಭಾಗದಲ್ಲಿ ಕೆಲಸಗಳಿಗೆ ಅಲ್ಲಿಯೇ ವ್ಯವಸ್ಥೆ ಕಲ್ಪಿಸಿ ಅವರು ನಗರ ಪ್ರದೇಶಕ್ಕೆ ಬಾರದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾಡಳಿತದ ಸೂಚನೆಯಂತೆ ಪಂಚಾಯತ್ ಪಿಡಿಒಗಳ ಮೂಲಕ ಗ್ರಾಮೀಣ ಭಾಗದಲ್ಲಿ ಅಗತ್ಯ ಸೇವೆ ಸಿಗುವಂತೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ ಎಂದರು.