ಕಾರವಾರ: ಬಾಕಿ ಹಣ ನೀಡಲು ನಿರ್ಲಕ್ಷ್ಯ ವಹಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಆದೇಶದ ಮೇರೆಗೆ ಎಪಿಎಂಸಿಯ ( Honnavar APMC) ಚರಾಸ್ತಿಗಳನ್ನು ಜಪ್ತಿ ಮಾಡಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಘಟನೆ ಹೊನ್ನಾವರ(honnavar)ದಲ್ಲಿ ನಡೆದಿದೆ.
ಹೊನ್ನಾವರದ ಕಮಟೆಹಿತ್ತಲದ ಸುಬ್ರಾಯ ಶಿವಾನಂದ ಎನ್ನುವವರಿಗೆ ಎಪಿಎಂಸಿ 1,44,83,201 ರೂ. ಪಾವತಿಸಬೇಕಿತ್ತು. ಆದರೆ ಅದನ್ನು ಪಾವತಿಸದ ಕಾರಣ ಭಟ್ಕಳ ಉಪವಿಭಾಗಾಧಿಕಾರಿ ಹಾಗೂ ಹೊನ್ನಾವರ ಎಪಿಎಂಸಿ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಕೂಡ ಬಾಕಿ ಪಾವತಿಗೆ ಆದೇಶಿಸಿ ಹಲವು ದಿನಗಳಾದರೂ ಎಪಿಎಂಸಿಯು ಅರ್ಜಿದಾರನಿಗೆ ಹಣ ಪಾವತಿಸಿರಲಿಲ್ಲ.
ಬಾಕಿ ಹಣವನ್ನು ನೀಡಲು ವಿಫಲವಾದ ಹಿನ್ನೆಲೆ ಹೊನ್ನಾವರದ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ. ಅವರು ಎಪಿಎಂಸಿಯ ಚರಾಸ್ತಿಗಳನ್ನು ಜಪ್ತಿ ಪಡಿಸಿಕೊಳ್ಳಲು ಆದೇಶ ನೀಡಿದ್ದರು. ಅದರಂತೆ ನ್ಯಾಯಾಲಯದ ಸಿಬ್ಬಂದಿ ಎಪಿಎಂಸಿಗೆ ತೆರಳಿ, ಕಚೇರಿಯಲ್ಲಿದ್ದ ಕುರ್ಚಿ, ಕಪಾಟು, ಪ್ರಿಂಟರ್, ಟೇಬಲ್‌ಗಳನ್ನು ಜಪ್ತಿ ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಂ.ಎಲ್. ನಾಯ್ಕ ಮತ್ತು ಸೂರಜ್ ನಾಯ್ಕ ವಾದಿಸಿದ್ದರು.
ಇದನ್ನೂ ಓದಿ:ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ಸಾಗಣೆ: ಇಬ್ಬರು ಆರೋಪಿಗಳ ಬಂಧನ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಪಿಎಂಸಿ ಅಧ್ಯಕ್ಷ ಗೋಪಾಲ ನಾಯ್ಕ ಭಟ್ಕಳ, ಸಂಸ್ಥೆ ವಿರುದ್ಧ ಹೊನ್ನಾವರ ನ್ಯಾಯಾಲಯ ನೀಡಿದ ಆದೇಶದ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ನಿಯಮದ ಪ್ರಕಾರ, ಠೇವು ಹಣವನ್ನು ಕೂಡ ಮೇಲ್ಮನವಿ ಸಲ್ಲಿಸುವ ಸಮಯದಲ್ಲಿ ಇಡಲಾಗಿದೆ. ಶೀಘ್ರದಲ್ಲಿ ಸುಪ್ರೀಂಕೋರ್ಟ್ನಲ್ಲಿ ನಮ್ಮ ಪರ ಆದೇಶ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.