ಶಿರಸಿ (ಉತ್ತರ ಕನ್ನಡ):ಕಳೆದ 6 ದಿನಗಳ ಹಿಂದೆ ದ್ವಿಚಕ್ರ ವಾಹನ ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಆರೋಪಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಶಿರಸಿಯ ನಗರ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಆರೋಪಿಯ ಸಂಪರ್ಕದಲ್ಲಿದ್ದ 6 ಪೊಲೀಸ್ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಧಾರವಾಡದ ಟೋಲ್ ನಾಕಾ ಜನತ್ ನಗರದ ನಿವಾಸಿ ಬಂಧಿತ ಆರೋಪಿಯಾಗಿದ್ದು, ಈತನಿಗೆ ಈಗ ಕೋವಿಡ್ ದೃಢವಾಗಿದೆ. ಆರೋಪಿ ಎರಡು ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ. ಈತನಿಂದ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡು, ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಯ ಬಂಧನ ವೇಳೆ ಆತನಿಗೆ ನೆಗೆಟಿವ್ ಬಂದಿತ್ತು. ಆದರೆ ಈಗ ಎರಡನೇ ತಪಾಸಣೆಯಲ್ಲಿ ಪಾಸಿಟಿವ್ ಬಂದಿದೆ. ಆತನನ್ನು ಬಂಧಿಸಿ ಶಿರಸಿ ನಗರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಈ ಹಿನ್ನೆಲೆ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.