ಭಟ್ಕಳ: ಮತ್ತೆ ಮೂವರಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಹೌದು, ದುಬೈನಿಂದ ಬಂದಿದ್ದ 65 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಈ ವ್ಯಕ್ತಿಯ ಕುಟುಂಬದವರಿಗೂ ಸೋಂಕು ಇರುವುದು ದೃಢಪಟ್ಟಿದೆ.
ಈತನ 55 ವರ್ಷದ ಪತ್ನಿ, 22 ಹಾಗೂ 28 ವರ್ಷ ಪುತ್ರಿಯರಿಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟಾರೆ ಈಗ ಭಟ್ಕಳ ಮೂಲದ ಏಳು ಜನರಲ್ಲಿ ಸೋಂಕು ಇರುವುದು ದೃಢಪಟ್ಟಂತಾಗಿದೆ.
ಭಟ್ಕಳದಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಸೋಂಕು ದೃಢ! ಈ ಮೊದಲು ಸೋಂಕು ದೃಢಪಟ್ಟವರು:
1). ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾರ್ಚ್ 19ರಂದು ಸ್ಪೈಸ್ ಜೆಟ್ ವಿಮಾನದ ಮೂಲಕ ಬೆಳಗ್ಗೆ 5.45ಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿದಾಗ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ನೇರವಾಗಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸದ್ಯ ಅಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
2). 40 ವರ್ಷದ ಭಟ್ಕಳ ಮೂಲದ ವ್ಯಕ್ತಿ ಮಾ. 21ರಂದು ದುಬೈನಿಂದ ವಿಮಾನದಲ್ಲಿ ಬಂದು ಮಂಗಳೂರಿನಲ್ಲಿ ಬೆಳಿಗ್ಗೆ 6.30ಕ್ಕೆ ಇಳಿದಿದ್ದರು. ಅವರ ಸಂಬಂಧಿಯೊಬ್ಬರ ಕಾರಿನಲ್ಲಿ ಭಟ್ಕಳಕ್ಕೆ ಬಂದಿದ್ದ ಅವರು, ಮಧ್ಯಾಹ್ನ ತಾವೇ ಸ್ವಯಂಪ್ರೇರಿತವಾಗಿ ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಲಕ್ಷಣ ಕಂಡು ಬಂದಿದ್ದರಿಂದ ಗಂಟಲಿನ ದ್ರವವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಾ. 23ರಂದು ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿತ್ತು.
3). 65 ವರ್ಷದ ಭಟ್ಕಳ ಮೂಲದ ಇವರು, ದುಬೈನಿಂದ ಮಾ. 19ರಂದು ಮುಂಬೈಗೆ ಬಂದು ಇಳಿದಿದ್ದರು. ಅಲ್ಲಿಂದ ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಭಟ್ಕಳಕ್ಕೆ ಮಾ. 20ರಂದು ಬಂದು ಇಳಿದಿದ್ದರು. ರೈಲು ನಿಲ್ದಾಣದಿಂದ ಆಟೋ ರಿಕ್ಷಾದಲ್ಲಿ ಮಗನ ಜೊತೆಗೆ ಮನೆಗೆ ತೆರಳಿದ್ದರು. 21ರಂದು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡಿದ್ದು, ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಎರಡು ದಿನದ ಬಳಿಕ ಜ್ವರ ಸೇರಿದಂತೆ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಗಂಟಲಿನ ದ್ರವವನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಮಾ. 23ರಂದು ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿತ್ತು.
4) ದುಬೈನಿಂದ ಮಾ. 20ರಂದು ಗೋವಾ ದಾಬೋಲಿಯಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ 22 ವರ್ಷದ ಯುವಕ, ಕಾರವಾರದ ಹೋಟೆಲ್ವೊಂದರಲ್ಲಿ ಉಪಹಾರ ಸೇವಿಸಿ ಸಹೋದರನ ಜೊತೆಯಲ್ಲಿ ಭಟ್ಕಳಕ್ಕೆ ಬಂದಿದ್ದ. ಈತನಲ್ಲೂ ಸೋಂಕು ಇರುವುದು ದೃಢಪಟ್ಟಿದೆ.