ಕಾರವಾರ:ಯಲ್ಲಾಪುರದ ಖಾಸಗಿ ಶಾಲೆಯೊಂದರ 21 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದೀಗ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶಾಲೆಯ ಕನ್ನಡ ಮಾಧ್ಯಮ ವಿಭಾಗದ ಹತ್ತನೇ ತರಗತಿಯ ಓರ್ವ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಸೇರಿದಂತೆ 123 ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಸೋಮವಾರ ಪರೀಕ್ಷೆಯ ವರದಿ ಬಂದಿದ್ದು, 21 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂಬುದು ದೃಢಪಟ್ಟಿದೆ.
ಇದನ್ನೂ ಓದಿ:'ರಾಜ್ಯದಲ್ಲಿ ಲಾಕ್‌ಡೌನ್, ನೈಟ್ ಕರ್ಫ್ಯೂ ಇಲ್ಲ': ನಿಮಗೆ ಗೊತ್ತಿರಬೇಕಾದ ಪ್ರಮುಖ ವಿಚಾರಗಳು ಇಲ್ಲಿವೆ..
ವಿಷಯ ತಿಳಿಯುತ್ತಿದ್ದಂತೆ ಇಡೀ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕನ್ನಡ ಮಾಧ್ಯಮ ಹಾಗೂ ಇಂಗ್ಲೀಷ್ ಮಾಧ್ಯಮ ಮತ್ತು ಕಾಲೇಜು ಪ್ರತ್ಯೇಕ ಇರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಕೋಲಾದಲ್ಲಿ ಒಂದೇ ದಿನ 11 ಪ್ರಕರಣ:
ಜಿಲ್ಲೆಯಲ್ಲಿ ಸೋಮವಾರದ ಯಲ್ಲಾಪುರ ಪ್ರಕರಣ ಹೊರತು ಪಡಿಸಿ 16 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅಂಕೋಲಾ ತಾಲೂಕಿನಲ್ಲಿ 11 ಪ್ರಕರಣಗಳು ದಾಖಲಾಗಿದ್ದು, ಕಾರವಾರದಲ್ಲಿ 3, ಶಿರಸಿ 1 ಹಾಗೂ ಯಲ್ಲಾಪುರದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಹೊನ್ನಾವರ, ಭಟ್ಕಳ ಹಾಗೂ ಜೋಯಿಡಾದಲ್ಲಿ ತಲಾ ಒಬ್ಬರಂತೆ ಮೂವರು ಚಿಕಿತ್ಸೆ ಪಡೆದು ಸೋಮವಾರ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 14,910 ಪ್ರಕರಣ ದೃಢಪಟ್ಟಿದ್ದು, 14,639 ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನು 188 ಜನರು ಮೃತಪಟ್ಟಿದ್ದಾರೆ. 23 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 60 ಜನರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು 83 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.