ಕಾರವಾರ (ಉತ್ತರ ಕನ್ನಡ):ಅನ್ಲಾಕ್ ನಂತರವೂ ಉತ್ತರ ಕನ್ನಡದ ಕಡಲ ತೀರಗಳು (ಗೋಕರ್ಣ, ಕುಡ್ಲೆ, ಓಂ ಮತ್ತು ಮುರುಡೇಶ್ವರ ಕಡಲತೀರಗಳು) ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ. ಇನ್ನು ಪ್ರವಾಸಿಗರನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಹೋಟೆಲ್, ರೆಸ್ಟೊರೆಂಟ್ ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಜಿಲ್ಲೆಯ ಪ್ರವಾಸಿ ತಾಣಗಳು ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ಸ್ವಚ್ಛಂದ ಕಡಲ ತೀರಗಳಿಗೆ ಅದೆಷ್ಟೋ ದೇಶ-ವಿದೇಶಿ ಪ್ರವಾಸಿಗರು ಮನಸೋತಿದ್ದಾರೆ. ವರ್ಷದುದ್ದಕ್ಕೂ ಆಗಮಿಸಿ ಎಂಜಾಯ್ ಮಾಡುತ್ತಿದ್ದ ಪ್ರವಾಸಿಗರು, ಕೊರೊನಾ ಭೀತಿಯಿಂದಾಗಿ ಹೆಜ್ಜೆ ಹಾಕಲು ಒಲವು ತೋರುತ್ತಿಲ್ಲ. ಲಾಕ್ಡೌನ್ನಿಂದ ಬಂದ್ ಆಗಿದ್ದ ಪ್ರವಾಸಿ ತಾಣಗಳು ಅನ್ಲಾಕ್ ನಂತರ ನೋಡುಗರಿಗೆ ಮುಕ್ತವಾಗಿವೆ.
ನಮ್ಮ ದೇಶ, ರಾಜ್ಯದ ಪ್ರವಾಸಿಗರೇ ಅಲ್ಲದೆ ವಿದೇಶಿಗರ ದಂಡೇ ಈ ಪ್ರೇಕ್ಷಣೀಯ ಸ್ಥಳಗಳತ್ತ ಬರುತ್ತಿತ್ತು. ಕೊರೊನಾದಿಂದ ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಂಡಿದ್ದು, ಅದು ಪ್ರಾರಂಭವಾಗುವವರೆಗೂ ವಿದೇಶಿಗರ ಮುಖ ದರ್ಶನ ಇಲ್ಲವಾಗಿದೆ. ಓಂ ಬೀಚ್, ಕುಡ್ಲೆ ಬೀಚ್‌ಗಳಲ್ಲಿ ಇನ್ನೂ ಲಾಕ್‌ಡೌನ್ ಸ್ಥಿತಿಯೇ ನಿರ್ಮಾಣವಾಗಿದೆ. ಕಡಲತೀರದ ಹೋಟೆಲ್, ರೆಸ್ಟೋರೆಂಟ್‌ಗಳು ಗ್ರಾಹಕರಿಲ್ಲದೆ ಮತ್ತೆ ಬಂದ್ ಆಗುವಂತಾಗಿದೆ ಎನ್ನುತ್ತಾರೆ ಹೊಟೆಲ್ ಮಾಲೀಕರು.
ಸಂಕಷ್ಟದಲ್ಲಿ ಕಡಲತೀರದ ವ್ಯಾಪಾರಿಗಳು ವಾರಾಂತ್ಯದಲ್ಲಿ ಕೆಲವೇ ಕೆಲವು ದೇಶಿಯ ಪ್ರವಾಸಿಗರು ಬರುತ್ತಾರಾದರೂ ಕೊರೊನಾ ಆತಂಕದಿಂದ ಮೋಜು, ಮಸ್ತಿ ಮಾಡಿಕೊಂಡು ವಾಪಸಾಗುತ್ತಿದ್ದಾರೆ. ಅನ್ಲಾಕ್ ಪುನಃ ವ್ಯಾಪಾರ ವಹಿವಾಟು ನಡೆಸಿ ಬದುಕು ಕಟ್ಟಿಕೊಳ್ಳುವ ಆಸೆಯಲ್ಲಿದ್ದ ಅಂಗಡಿಕಾರರು ಕೆಲಸಗಾರರಿಗೆ ವೇತನ ಸಂಬಳ ನೀಡುವುದಕ್ಕೂ ಪರದಾಡಬೇಕಾಗಿದೆ ಎನ್ನುವುದು ವ್ಯಾಪಾರಸ್ಥರ ಅಭಿಪ್ರಾಯ.