ಕರ್ನಾಟಕ

karnataka

ETV Bharat / state

ಮೂಲ ಕಸುಬಿಗೂ ಕುತ್ತು ತಂದ ಕೊರೊನಾ: ಸಂಕಷ್ಟದಲ್ಲಿದೆ ದನಗರ ಗೌಳಿ ಸಮುದಾಯ - ದನಗರ ಗೌಳಿ ಸಮುದಾಯದವರ ಸಂಕಷ್ಟ

ಹಳಿಯಾಳ ತಾಲೂಕಿನ ಭಾಗವತಿ ಪಂಚಾಯಿತಿ ವ್ಯಾಪ್ತಿಯ ಕೊಲೆರಂಗದಲ್ಲಿ ವಾಸಿಸುತ್ತಿರುವ ದನಗರ ಗೌಳಿ ಸಮುದಾಯದ ಜನರು, ತಲೆ ತಲಾಂತರಗಳಿಂದ ಹಸು, ಎಮ್ಮೆಗಳನ್ನು ಸಾಕಿ ಅದರ ಉತ್ಪನ್ನಗಳನ್ನು ಮಾರಿ ಜೀವನ ನಡೆಸುತ್ತಿದ್ದರು. ಆದರೆ, ಕಳೆದ ಎರಡು ತಿಂಗಳಿಂದ ಹಾಲು, ತುಪ್ಪ ಸೇರಿದಂತೆ ಇತರೆ ಉತ್ಪನ್ನಗಳನ್ನು ಮಾರಲಾಗದೇ ಕಂಗಾಲಾಗಿದ್ದಾರೆ.

karwar
ಸಂಕಷ್ಟದಲ್ಲಿ ದನಗರ ಗೌಳಿ ಸಮುದಾಯ

By

Published : Jun 24, 2021, 1:52 PM IST

ಕಾರವಾರ: ಆ ಸಮುದಾಯಕ್ಕೆ ಹೈನುಗಾರಿಕೆಯೇ ಮೂಲ ಕಸುಬು. ತಲೆತಲಾಂತರಗಳಿಂದ ಹಸುಗಳನ್ನು ಸಾಕಿ ಅದರ ಉತ್ಪನ್ನಗಳಿಂದ ಬದುಕು ಕಟ್ಟಿಕೊಳ್ಳುತ್ತಿದ್ದವರಿಗೆ ಈ ಬಾರಿ ಕೊರೊನಾ ಲಾಕ್​​ಡೌನ್​ ಇನ್ನಿಲ್ಲದ ಆಘಾತ ಉಂಟು ಮಾಡಿದೆ. ಪ್ರತಿನಿತ್ಯ ಹತ್ತಾರು ಲೀಟರ್ ಹಾಲು ಕರೆದರೂ ಕೊಳ್ಳುವವರಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ.

ಸಂಕಷ್ಟದಲ್ಲಿ ದನಗರ ಗೌಳಿ ಸಮುದಾಯ

ದನಗರ ಗೌಳಿ ಸಮುದಾಯದ ಜನರು ಇದೀಗ ಆರ್ಥಿಕ ಸಂಕಷ್ಟದಿಂದ ಜರ್ಜರಿತರಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಭಾಗವತಿ ಪಂಚಾಯಿತಿ ವ್ಯಾಪ್ತಿಯ ಕೊಲೆರಂಗದಲ್ಲಿ ವಾಸಿಸುತ್ತಿರುವ ಇವರಿಗೆ ಕೊರೊನಾ ಇನ್ನಿಲ್ಲದ ತೊಂದರೆ ಕೊಟ್ಟಿದೆ. ತಲೆ ತಲಾಂತರಗಳಿಂದ ಹಸು, ಎಮ್ಮೆಗಳನ್ನು ಸಾಕಿ ಅದರ ಉತ್ಪನ್ನಗಳನ್ನು ಮಾರಿ ಜೀವನ ನಡೆಸುತ್ತಿದ್ದವರಿಗೆ ಕಳೆದ ಎರಡು ತಿಂಗಳಿಂದ ಹಾಲು, ತುಪ್ಪ ಸೇರಿದಂತೆ ಇತರೆ ಉತ್ಪನ್ನಗಳನ್ನು ಮಾರಲಾಗುತ್ತಿಲ್ಲ.

ಪ್ರತಿನಿತ್ಯ ನೂರಾರು ಲೀಟರ್ ಕರೆದ ಹಾಲನ್ನು ಖರೀದಿಸುತ್ತಿದ್ದ ವ್ಯಾಪಾರಿಗಳು, ಹೊಟೇಲ್​ನವರು ಕೂಡ ಹಾಲು ಕೊಂಡುಕೊಳ್ಳುತ್ತಿಲ್ಲ. ಊರಿಗೆ ಬಂದು ಖರೀದಿಸುತ್ತಿದ್ದ ಕೆಲವರು ಈಗ ಆಗಮಿಸುತ್ತಿಲ್ಲ. ಇದರಿಂದ ಹಾಲು ಮನೆಯಲ್ಲಿಯೇ ಉಳಿಯುತ್ತಿದ್ದು, ಬಳಕೆಗೂ ಹೆಚ್ಚಾದ ಕಾರಣ ಚೆಲ್ಲಬೇಕಾದ ಸ್ಥಿತಿ ಇದೆ. ಅಲ್ಲದೆ, ಇದೀಗ ಲಾಕ್​ಡೌನ್​ ಓಪನ್ ಆದರೂ ಸಹ ಮೊದಲಿನ ಹಾಗೆ ಬಂದು ಖರೀದಿ ಮಾಡುವವರಿಲ್ಲದೆ ಅದೇ ಸ್ಥಿತಿ ಇದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಕಳೆದ ಸುಮಾರು 80 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಬಂದು ಕೊಲೆರಂಗದಲ್ಲಿ ನೆಲೆಸಿದ್ದ ಸಮುದಾಯದವರು, ಇದೀಗ ಸುಮಾರು 40ಕ್ಕೂ ಹೆಚ್ಚು ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ನೌಕರಿ, ವ್ಯಾಪಾರ‌ ಸೇರಿದಂತೆ ಇತರೆ ಯಾವುದೇ ಉದ್ಯೋಗದಲ್ಲಿ ಇಲ್ಲದ ಗ್ರಾಮದ ಜನರಿಗೆ ಹೈನುಗಾರಿಕೆಯೇ ಮುಖ್ಯ ಕಸುಬಾಗಿದೆ. ಪ್ರತಿ ಮನೆಯಲ್ಲಿ 10 ರಿಂದ 20 ಹಸು, ಎಮ್ಮೆಗಳನ್ನು ಕಟ್ಟಿ ಅದರಿಂದ ಸಿಗುವ ಹಾಲು ಹಾಗೂ ಇತರ ಉತ್ಪನ್ನಗಳ ಮೂಲಕವೇ ಜೀವನ ಕಟ್ಟಿಕೊಂಡಿದ್ದರು.

ಆದರೆ, ಮೊದಲ ಲಾಕ್​ಡೌನ್​ ವೇಳೆಯೇ ಸಾಕಷ್ಟು ತೊಂದರೆ ಅನುಭವಿಸಿದ್ದ ಸಮುದಾಯದ ಜನ ಇದೀಗ, ಎರಡನೇ ಅಲೆಯಲ್ಲಿಯೂ ಹಾಲು ಮಾರಲಾಗದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಇತರೆ ಸಮುದಾಯದವರ ಆರ್ಥಿಕ ಸ್ಥಿತಿ ಗುರುತಿಸಿದಂತೆ ನಮ್ಮನ್ನು ಪರಿಗಣಿಸಿ ಸೂಕ್ತ ಪರಿಹಾರ ಘೋಷಣೆ ಮಾಡಲಿ ಎಂಬುದು ಗೌಳಿ ಸಮುದಾಯದವರ ಆಗ್ರಹವಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮಹಿಳಾ ಮಾಜಿ ಕಾರ್ಪೊರೇಟರ್​ ಬರ್ಬರ ಹತ್ಯೆ.. ಅಂದು ಪತಿ, ಇಂದು ಪತ್ನಿಯ​ ಕೊಲೆ!

ABOUT THE AUTHOR

...view details