ಕಾರವಾರ(ಉತ್ತರಕನ್ನಡ): ಉತ್ತರಕನ್ನಡದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಇಂದು 900ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.
ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 600 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇಂದು ಅದಕ್ಕಿಂತಲೂ ಹೆಚ್ಚಿನ ಪ್ರಕರಣಗಳು ದೃಢವಾಗುವ ಸಾಧ್ಯತೆಗಳಿದ್ದು, ಅದರಲ್ಲಿ ನೌಕಾನೆಲೆ ಹಾಗು ಮೆಡಿಕಲ್ ಕಾಲೇಜು ಸೇರಿ ಕಾರವಾರದಲ್ಲೇ ಹೆಚ್ಚಿನ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಇದುವರೆಗೆ 25 ಶಿಕ್ಷಣ ಸಂಸ್ಥೆಗಳನ್ನ ಕ್ಲಸ್ಟರ್ ಆಗಿ ಘೋಷಿಸಿ ಬಂದ್ ಮಾಡಲಾಗಿದೆ ಎಂದರು.
5 ಪಾಸಿಟಿವ್ ಪ್ರಕರಣ ಪತ್ತೆಯಾದ ಶಾಲೆಗಳನ್ನೇ ಕ್ಲಸ್ಟರ್ ಎಂದು ಪರಿಗಣಿಸಲಾಗುತ್ತಿದೆ. ಅದರಂತೆ ಇಂದು ದಾಂಡೇಲಿ 4, ಹೊನ್ನಾವರ 3 ಹಾಗು ಯಲ್ಲಾಪುರ, ಶಿರಸಿ, ಕುಮಟಾದಲ್ಲಿ ತಲಾ ಒಂದು ಸೇರಿ ಮತ್ತೆ 10 ಶಾಲೆಗಳನ್ನ ಬಂದ್ ಮಾಡಲು ಆದೇಶಿಸಲಾಗಿದೆ ಎಂದು ಹೇಳಿದರು.