ಕಾರವಾರ(ಉತ್ತರಕನ್ನಡ): ರಾಜ್ಯದಲ್ಲಿ ಈ ಬಾರಿ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಕೊರೊನಾದಿಂದಾಗಿ ಕಳೆದೆರಡು ತಿಂಗಳಿನಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಮೀನುಗಾರರ ಕಷ್ಟವನ್ನ ಅರಿತ ಸರ್ಕಾರ ಮೀನುಗಾರಿಕೆ ಅವಧಿಯನ್ನ 14 ದಿನಗಳವರೆಗೆ ವಿಸ್ತರಣೆ ಮಾಡಿತ್ತು. ಆದ್ರೆ ಅನುಮತಿ ನೀಡಿದರೂ ಮೀನುಗಾರಿಕೆ ನಡೆಸಲಾಗದ ಪರಿಸ್ಥಿತಿ ಮೀನುಗಾರರದ್ದಾಗಿದೆ.
ಉತ್ತರಕ ನ್ನಡ ಜಿಲ್ಲೆಯ ಕರಾವಳಿಯಲ್ಲಿ ಈ ಬಾರಿ ಮೀನುಗಾರರ ಪರಿಸ್ಥಿತಿ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ. ಉತ್ತಮ ಮೀನುಗಾರಿಕೆ ನಡೆಯಬೇಕಾಗಿದ್ದ ಅವಧಿಯಲ್ಲಿ ಕೊರೊನಾ ಭೀತಿಯಿಂದಾಗಿ ಮೀನುಗಾರಿಕೆ ಸ್ಥಗಿತ ಮಾಡಲಾಗಿತ್ತು. ಇನ್ನೇನು ಮಳೆಗಾಲ ಆರಂಭವಾಗುವ ಹಂತದಲ್ಲೇ 14 ದಿನಗಳ ಕಾಲ ಮೀನುಗಾರಿಕೆ ಅವಧಿಯನ್ನ ಸರ್ಕಾರ ವಿಸ್ತರಣೆ ಮಾಡಿದ್ರೂ ಪ್ರಯೋಜನವಾಗ್ತಿಲ್ಲವಂತೆ.
ಕಾರವಾರದ ಬೈತಖೋಲ ಬಂದರಿನಲ್ಲಿ 200ಕ್ಕೂ ಅಧಿಕ ಯಾಂತ್ರಿಕ ಮೀನುಗಾರಿಕಾ ಬೋಟುಗಳಿದ್ದು, ಸಾವಿರಾರು ಮಂದಿ ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಸಾಲ ಮಾಡಿ ಮೀನುಗಾರಿಕೆ ಪ್ರಾರಂಭಿಸಿದ ಮೀನುಗಾರರಿಗೆ ಕೋವಿಡ್ ಪೆಟ್ಟು ಕೊಟ್ಟಿತ್ತು. ಇದೀಗ ಮೀನುಗಾರರ ಸಂಕಷ್ಟವನ್ನ ಅರಿತ ಸರ್ಕಾರ ಜೂನ್ ತಿಂಗಳಲ್ಲಿ 14 ದಿನ ಮೀನುಗಾರಿಕೆ ನಡೆಸಲು ಅವಕಾಶ ನೀಡಿದರೂ ಯಾರಿಗೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಮೀನುಗಾರಿಕಾ ಬೋಟ್ ಮಾಲೀಕರಾದ ಶ್ರೀಧರ ತಾಂಡೇಲ.