ಕಾರವಾರ:ಅವರೆಲ್ಲರೂ ಕಳೆದ ಹತ್ತಾರು ವರ್ಷಗಳಿಂದ ಕಾರವಾರದ ಜಿಲ್ಲಾ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರು. ಪಿಎಫ್, ಇಎಸ್ಐನಂತಹ ಹತ್ತಾರು ಸೌಲಭ್ಯ ಪಡೆಯಬೇಕಿದ್ದ ಕಾರ್ಮಿಕರಿಗೆ ಗುತ್ತಿಗೆದಾರನೊಬ್ಬ ಕಳೆದ ಹಲವು ವರ್ಷಗಳಿಂದ ವಂಚಿಸತೊಡಗಿದ್ದ. ಈ ಬಗ್ಗೆ ಅರಿತ ಕಾರ್ಮಿಕರು ಗುತ್ತಿಗೆದಾರನನ್ನು ಬದಲಿಸುವಂತೆ ವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದು, ಇಂದು ಬೃಹತ್ ಪ್ರತಿಭಟನೆ ಮೂಲಕ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಗುತ್ತಿಗೆ ಕಾರ್ಮಿಕರಿಂದ ಪ್ರತಿಭಟನೆ ಕಾರವಾರದ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸುಮಾರು 150 ಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರಲ್ಲಿಯೂ ಕೆಲವರು ಕಳೆದ 20 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕ್ಲೀನಿಂಗ್, ವಾಚಮನ್, ಬಟ್ಟೆ ಒಗೆಯುವುದು ಸೇರಿದಂತೆ ಇನ್ನಿತರ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಪ್ರತಿ ವರ್ಷ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ, ಗುತ್ತಿಗೆ ಪಡೆದ ಮಧುರಾ ಏಜೆನ್ಸಿ ಕಂಪನಿ ಇಷ್ಟು ವರ್ಷಗಳಿಂದ ಕರ್ತವ್ಯ ನಿಭಾಯಿಸಿಕೊಂಡು ಬಂದವರ ಪಿಎಫ್, ಇಎಸ್ ಐ ಹಣಗಳನ್ನು ತುಂಬದೇ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾರ್ಮಿಕರು ಕಂಪನಿಯನ್ನು ಬ್ಲಾಕ್ ಲಿಸ್ಟ್ಗೆ ಸೇರಿಸುವಂತೆ ಒತ್ತಾಯಿಸಿದ್ದರು. ಇಷ್ಟಾದರೂ ಅದೇ ಕಂಪನಿಗೆ ಈ ವರ್ಷವೂ ಟೆಂಡರ್ ನೀಡಿದ್ದು, ಸಿಟ್ಟಿಗೆದ್ದ ಗುತ್ತಿಗೆ ಕಾರ್ಮಿಕರು ಕಳೆದ ಒಂದು ವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಇಷ್ಟಾದರೂ ಯಾವೊಬ್ಬ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆ ಆಸಲಿಸಲು ಬಾರದ ಹಿನ್ನೆಲೆಯಲ್ಲಿ ಇಂದು ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಗುತ್ತಿಗೆ ಕಾರ್ಮಿಕರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುತ್ತಿಗೆದಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ನಗರದ ಸುಭಾಷ್ ವೃತ್ತದಲ್ಲಿ ಗುತ್ತಿಗೆದಾರನ ಪ್ರತಿಕೃತಿ ಧಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸಂಘ-ಸಂಸ್ಥೆ ಇಲ್ಲವೇ ಕಂಪನಿಗಳಲ್ಲಿ ಕಡಿಮೆ ಸಂಬಳ ಪಡೆದು ಜೀವನ ನಡೆಸುವವರಿಂದ ಉಳಿತಾಯ ಸಾಧ್ಯವಾಗದ ಹಿನ್ನೆಲೆಯಲ್ಲಿ ದುಡಿಮೆಯಲ್ಲಿನ ಉಳಿತಾಯಕ್ಕಾಗಿ ಸರ್ಕಾರ ಪಿಎಫ್, ಇಎಸ್ಐ ಸೌಲಭ್ಯಗಳನ್ನ ಜಾರಿಗೆ ತಂದಿದೆ. ಆದ್ರೆ ಯೋಜನೆ ಸೌಲಭ್ಯ ಸಿಗದೇ ಇದ್ದರೂ ಕೂಡ ಕಾರ್ಮಿಕ ಇಲಾಖೆಯಾಗಲಿ, ಪಿಎಫ್ ಅಧಿಕಾರಿಗಳಾಗಲಿ ವಂಚನೆ ಮಾಡುತ್ತಿರುವವರ ಮೇಲೆ ಕ್ರಮ ಜರುಗಿಸುತ್ತಿಲ್ಲ. ಕೂಡಲೇ ಇಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು. ಅಲ್ಲದೇ ಈ ಕೂಡಲೇ ಟೆಂಡರ್ ಅನ್ನು ಬೇರೆ ಗುತ್ತಿಗೆದಾರನಿಗೆ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಗುತ್ತಿಗೆ ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.