ಕಾರವಾರ:ಕಳೆದ ಒಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಎಲ್ಲೆಡೆ ಪ್ರವಾಹ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಒಂದು ವಾರದಿಂದ ರಜೆ ನೀಡಲಾಗಿದ್ದು, ನಾಳೆಯೂ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಕರಾವಳಿ ಹಾಗೂ ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಮನೆಗಳನ್ನು ಕಳೆದುಕೊಂಡ ಜನರು ಪರಿಹಾರ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಈ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರವೂ ಕೂಡ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಆದೇಶ ಹೊರಡಿಸಿದ್ದಾರೆ.
ಪರಿಹಾರ ಕಾರ್ಯದಲ್ಲಿದ್ದವರಿಗೆ ರಜೆ ಇಲ್ಲ:
ಕಾರವಾರದಲ್ಲಿ ಮುಂದುವರೆದ ಮಳೆ ಜಿಲ್ಲೆಯಲ್ಲಿ ವರುಣ ಅಬ್ಬರ ಹೆಚ್ಚಾಗಿದ್ದು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಾಗಿದೆ. ಪರಿಹಾರ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಎಲ್ಲಾ ಅಧಿಕಾರಿಗಳೂ ಮುಂದಿನ ಮೂರು ದಿನಗಳ ರಜೆ ಅವಧಿಯಲ್ಲಿ ಕೇಂದ್ರಸ್ಥಾನ ಬಿಡದಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರವಾಹ ಹೆಚ್ಚಿರುವ ಹಿನ್ನೆಲೆಯಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸಂತ್ರಸ್ತರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಹಾನಿಯ ಪ್ರಮಾಣ ಅಂದಾಜು ಮಾಡಲಾಗುತ್ತಿದೆ. ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲ ನಿಯೋಜಿತ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಸಂತ್ರಸ್ತರಿಗೆ ನೆರವಾಗಬೇಕು ಎಂದು ಅವರು ಸೂಚನೆ ನೀಡಿದ್ದಾರೆ.