ಕಾರವಾರ: ರಾಜ್ಯದಲ್ಲಿ ಸದ್ಯ ಲೋಕಸಭಾ ಚುನಾವಣೆಯ ಕಾವು ಪ್ರಾರಂಭವಾಗಿದೆ. ಈ ಬಾರಿ ಹೆಚ್ಚು ಸ್ಥಾನದಲ್ಲಿ ಗೆಲ್ಲಲೇ ಬೇಕು ಎಂದು ಆಡಳಿತರೂಢ ಕಾಂಗ್ರೆಸ್ ಪಕ್ಷ ತಯಾರಿಗೆ ಇಳಿದಿದೆ. ಇನ್ನು ಬಿಜೆಪಿಯ ಭದ್ರಕೋಟೆಯಾಗಿರುವ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಸಚಿವ ಹೆಚ್ ಕೆ ಪಾಟೀಲ್ ನೇತೃತ್ವದಲ್ಲಿ ಭಾನುವಾರ ಅಂಕೋಲಾ ಪಟ್ಟಣದಲ್ಲಿ ಕೈ ಶಾಸಕರು, ಮುಖಂಡರುಗಳು, ಕಾರ್ಯಕರ್ತರ ಒಳಗೊಂಡ ಲೋಕಸಭೆ ಚುನಾವಣೆ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ನೂರು ದಿನದ ಒಳಗೆ ಈಡೇರಿಸಿದ್ದು, ಇದನ್ನೆ ಮುಂದಿಟ್ಟುಕೊಂಡು ಜನರ ಮುಂದೆ ಹೋಗಿ ಪಕ್ಷವನ್ನು ಬಲಪಡಿಸುವಂತೆ ಸೂಚನೆ ನೀಡಲಾಯಿತು. ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದು ರಾಜ್ಯದಲ್ಲಿ 20 ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವ ಖಚಿತ ಎಂದು ಸಚಿವ ಹೆಚ್ ಕೆ ಪಾಟೀಲ್ ಅಭಿಪ್ರಾಯ ಪಟ್ಟರು.
ಇನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಳೆದ ಆರು ಬಾರಿ ಅನಂತ್ ಕುಮಾರ್ ಹೆಗಡೆ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದು ಈ ಬಾರಿ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ 5 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇರುವ ನಿಟ್ಟಿನಲ್ಲಿ ಗೆಲ್ಲಲೇಬೇಕು ಎನ್ನುವುದು ಪಕ್ಷದ ನಾಯಕರ ಬಯಕೆ. ಈಗಾಗಲೇ ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಶಾಸಕರಾದ ಭೀಮಣ್ಣ ನಾಯ್ಕ, ಆರ್ ವಿ ದೇಶಪಾಂಡೆ, ಸತೀಶ್ ಸೈಲ್, ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಸೇರಿದಂತೆ ಹಲವರ ಹೆಸರುಗಳು ಕೇಳಿ ಬಂದಿದ್ದು ಯಾರನ್ನು ಅಂತಿಮವಾಗಿ ಆಯ್ಕೆ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ.
ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಸಚಿವ ದೇಶಪಾಂಡೆ, ಯಾರನ್ನೇ ಅಭ್ಯರ್ಥಿ ಮಾಡಿದರು ಒಟ್ಟಿಗೆ ಕೆಲಸ ಮಾಡಿ ಗೆಲ್ಲಿಸೋಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಹೇಗಾದರು ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕು ಎನ್ನುವುದು ಪಕ್ಷದ ಚಿಂತನೆಯಾದರೆ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಗೈರು ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ತಾಲೀಮನ್ನ ಪ್ರಾರಂಭಿಸಿದ್ದು ವಿಧಾನಸಭಾ ಚುನಾವಣೆಯಂತೆ ಕಾಂಗ್ರೆಸ್ ಪಕ್ಷವನ್ನ ಜನರು ಕೈ ಹಿಡಿಯುತ್ತಾರೋ ಇಲ್ಲವೋ ಅನ್ನುವುದು ಚುನಾವಣೆ ನಂತರ ತಿಳಿಯಲಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ: ಗೃಹ ಸಚಿವ ಜಿ ಪರಮೇಶ್ವರ್