ಶಿರಸಿ:ಕಾಂಗ್ರೆಸ್ ಎಂದಿಗೂ ದೇಶವನ್ನು ಉದ್ಧಾರ ಮಾಡಿಲ್ಲ. ಅವರ ಸರ್ಕಾರ ಇದ್ದಾಗ ಯಾವ ಅಭಿವೃದ್ಧಿಯ ಬಿಲ್ ಗಳನ್ನೂ ಜಾರಿಗೆ ತಂದಿಲ್ಲ. ಅಭಿವೃದ್ಧಿ ಪರ ಬಿಲ್ ಜಾರಿಗೆ ತಂದಿರುವುದು ಬಿಜೆಪಿ ಮಾತ್ರ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಶಿರಸಿಯಲ್ಲಿ ಮಾತನಾಡಿದ ಅವರು, ಎಲ್ಲವನ್ನೂ ಪ್ರತಿಪಕ್ಷದವರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ನಾವು ಜಾರಿಗೆ ತರುವ ಎಲ್ಲಾ ಮಸೂದೆಗಳನ್ನ ಅವರು ವಿರೋಧಿಸುತ್ತಾರೆ. ರಚನಾತ್ಮಕವಾಗಿ ಕೆಲಸ ಮಾಡದೆ, ಎಲ್ಲದಕ್ಕೂ ಟೀಕೆ ಮಾಡುತ್ತಾರೆ ಎಂದು ಸರ್ಕಾರ ಜಾರಿಗೆ ತಂದಿರುವ ಕಾನೂನುಗಳನ್ನು ಸಮರ್ಥಿಸಿಕೊಂಡರು.
ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳಿಗೆ ಸಹಕಾರ ನೀಡದೆ, ಬೆಳಗ್ಗೆಯಿಂದ ಸಂಜೆಯವರೆಗೆ ರಾಜ್ಯ ಸರ್ಕಾರವನ್ನ ಕಾಂಗ್ರೆಸ್ ಟೀಕೆ ಮಾಡುತ್ತದೆ. ಅವರಿಗೆ ರೈತರ ಅಭಿವೃದ್ಧಿ ಬೇಕಾಗಿಲ್ಲ. ಅವರಿಗೆ ಎಲ್ಲವೂ ನಿಂತ ನೀರಾಗಿರಬೇಕು. ಬದಲಾವಣೆ ಅವಶ್ಯಕವಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದು, ಪರಿಷತ್ ನಲ್ಲಿ ಬಹುಮತದ ಕೊರತೆಯಿದೆ. ಆದ ಕಾರಣ ಮುಂಬರುವ ನಾಲ್ಕು ವಿಧಾನ ಪರಿಷತ್ ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದರು. ಇದೇ ವೇಳೆ ಮೀಸಲಾತಿ ಹಾಗೂ ಪಂಚಮಸಾಲಿ ಸಮುದಾಯಕ್ಕೆ ಸಚಿವ ಸ್ಥಾನ ನೀಡುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.