ಭಟ್ಕಳ(ಉತ್ತರ ಕನ್ನಡ):ರಾಜ್ಯದ 224 ಕ್ಷೇತ್ರಗಳಲ್ಲಿ ಬಿಜೆಪಿ ಕೈಗೊಂಡ ವಿಜಯ ಸಂಕಲ್ಪ ಯಾತ್ರೆಯು ಅಭೂತಪೂರ್ವ ಯಶಸ್ಸು ಕಂಡಿದೆ. ಜನರಲ್ಲಿ ಸಾಮಾಜಿಕ ನ್ಯಾಯದ ಭದ್ರತೆ ಜತೆಗೆ ದೇಶದ ಭದ್ರತೆಯ ದೃಷ್ಟಿಯಿಂದ ಪಿಎಫ್ಐ ಸಂಘಟನೆ ನಿಷೇಧ ಬಳಿಕ ಸಹ ಬಿಜೆಪಿ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.
ಇಲ್ಲಿನ ಚನ್ನಪಟ್ಟಣ ಹನುಮಂತ ದೇವಸ್ಥಾನದ ಶ್ರೀ ವೀರಾಂಜನೇಯ ಧರ್ಮಛತ್ರದಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ರಾಜ್ಯಾದ್ಯಂತ ಬೂತ್ ವಿಜಯ ಅಭಿಯಾನ, ಸಂಕಲ್ಪ ಅಭಿಯಾನ ಈಗ ದೊಡ್ಡ ಮಟ್ಟದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಸದ್ಯ ಆರಂಭಿಸಿದ್ದೇವೆ. ಮಾರ್ಚ್ 25ಕ್ಕೆ ದಾವಣಗೆರೆಯಲ್ಲಿ ಮಹಾಸಂಕಲ್ಪದೊಂದಿಗೆ ಸಮಾರೋಪ ಆಗಲಿದೆ ಎಂದು ತಿಳಿಸಿದರು.
ಈ ಯಾತ್ರೆಗೆ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ರಾಜ್ಯದಲ್ಲಿ ಬಿಜೆಪಿ ಸತತ ಸಮಾವೇಶ ಆಗುತ್ತಿದ್ದಂತೆ ಕಾಂಗ್ರೆಸ್ದಿಂದ ಪ್ರಜಾ ಧ್ವನಿ ಹಾಗೂ ಜೆಡಿಎಸ್ ಯಿಂದ ಪಂಚ ರತ್ನ ಯಾತ್ರೆಯ ಅಬ್ಬರ ಅಡಗಿ ಹೋಗಿದೆ. ಸದ್ಯಕ್ಕೆ ಜನಮಾನಸದಲ್ಲಿ ನಮ್ಮ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಮಾತ್ರ ಶಾಶ್ವತವಾಗಿದೆ. ಇವೆಲ್ಲದ ಫಲವಾಗಿ ನಮ್ಮ ಪಕ್ಷವು ಮತ್ತೆ ರಾಜ್ಯದಲ್ಲಿ ಗೆದ್ದು ಮತ್ತೊಮ್ಮೆ ಡಬಲ್ ಎಂಜಿನ ಸರ್ಕಾರ ಬರಲಿದೆ. ಸರ್ಕಾರದ ಯೋಜನೆಗಳು ಜನರ ಮನೆಗೆ ತಲುಪಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದರಾಮಣ್ಣ ಕಂಗಾಲು- ಕಟೀಲ್: ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಣ್ಣನಿಗೆ ಯಾವ ಕ್ಷೇತ್ರದಿಂದ ನಿಲ್ಲಬೇಕೆಂಬ ಗೊಂದಲದ ಜತೆಗೆ ಭಯ ಕಾಡುತ್ತಿದೆ. ವರುಣ ಕ್ಷೇತ್ರದಿಂದ ಸ್ಪರ್ಧಿಸಲು ಭಯ, ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಮನಸ್ಸು ಒಪ್ಪುತ್ತಿಲ್ಲ, ಕೋಲಾರದಿಂದ ಸ್ಪರ್ಧೆ ಮಾಡಿದರೆ ಸೋಲು ಖಚಿತ ಎಂಬ ವರದಿ ಕೇಳಿ ಕಂಗಾಲಾಗಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಣ್ಣ ಕ್ಷೇತ್ರವಿಲ್ಲ, ಕಾಂಗ್ರೆಸ್ ಸಹ ಹೀನಾಯ ಸ್ಥಿತಿಗೆ ಬಂದಿದೆ ಎಂದು ಅಪಾದಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲ್ಲುವ ಕ್ಷೇತ್ರ ಯಾವುದೇ ಎಂಬ ಭಯದಲ್ಲಿಯೇ ಲೆಕ್ಕಾಚಾರ ಹಾಕಿ ಕ್ಷೇತ್ರ ಆಯ್ದುಕೊಳ್ಳುವ ನತದೃ ಷ್ಟ ನಾಯಕರು ಕಾಂಗ್ರೆಸ್ನಲ್ಲಿದ್ದಾರೆ. ಅವರಲ್ಲಿನ ಆಂತರಿಕ ಕಲಹ ಪಕ್ಷದ ಕಾರ್ಯಕರ್ತರಿಗೆ ಗೊಂದಲ ಉಂಟಾಗಿದೆ. ಮುಖ್ಯಮಂತ್ರಿಗಳ ಸ್ಥಾನಕ್ಕೆ ಸದ್ಯ ಅವರ ಪಕ್ಷದಲ್ಲಿ ಮುಖಂಡರಲ್ಲಿಯೇ ಹೊಡೆದಾಟ ಆರಂಭವಾಗಿದೆ. ಸಿದ್ದರಾಮಣ್ಣ ಮುಖ್ಯಮಂತ್ರಿಯಾಗಲು ಶರ್ಟ್ ಹೊಲಿಸಿದ್ದಾರೆ.
ಆದರೂ ಅದು ಅವರು ಇನ್ನು ಮುಖ್ಯಮಂತ್ರಿ ಆಗುವ ಮರುಳಿನಲ್ಲಿದ್ದಾರೆ. ಅವರ ಸರ್ಕಾರ ಗ್ಯಾರಂಟಿ ಬರುವುದಿಲ್ಲ ಎಂಬ ಹಿನ್ನೆಲೆ ಜನರಿಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಮರೆಯಾಗುತ್ತಿದ್ದು, ಸದ್ಯದಲ್ಲೇ ಕಾಂಗ್ರೆಸ್ ಮುಕ್ತ ರಾಜ್ಯ ಆಗಲಿದೆ ಎಂದು ಟೀಕಿಸಿದರು. ಇದೇ ವೇಳೆ ಜೆಡಿಎಸ್ ಪಂಚರತ್ನ ಯಾತ್ರೆ ಪಂಕ್ಚರ್ ಆಗಿದೆ. ಹೀಗಾಗಿ ಜೆಡಿಎಸ್ನಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅವರ ಕುಟುಂಬದಲ್ಲಿಯೇ ಸಮಸ್ಯೆ ಎದುರಾಗಿದೆ ಎಂದು ವ್ಯಂಗ್ಯವಾಗಿ ಕುಟುಕಿದರು.