ಕಾರವಾರ (ಉತ್ತರ ಕನ್ನಡ): ಕಾರವಾರ-ಅಂಕೋಲಾ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಗೆದ್ದಿದ್ದಾರೆ. ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ 2,415 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕಾಂಗ್ರೆಸ್ ಈ ಗೆಲುವಿನೊಂದಿಗೆ ಕಾರವಾರ-ಅಂಕೋಲಾ ಕ್ಷೇತ್ರವನ್ನು ಮರಳಿ ಪಡೆದುಕೊಂಡಿತು.
ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಸತೀಶ್ ಸೈಲ್ 76,305 ಮತಗಳನ್ನು ಪಡೆದಿದ್ದಾರೆ. ರೂಪಾಲಿ ನಾಯ್ಕ 73,890 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಆಡಳಿತ ವಿರೋಧಿ ಅಲೆ, 40 ಪರ್ಸೆಂಟ್ ಭ್ರಷ್ಟಾಚಾರ ಆರೋಪ, 2018ರಲ್ಲಿ ಶಾಸಕರಾದಾಗ ನಡೆಸಿದ ಅಭಿವೃದ್ಧಿ ಕಾಮಗಾರಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು, ಮೀನುಗಾರರ ಪರ ಸಾಗರಮಾಲಾ ಹೋರಾಟಕ್ಕೆ ನಿಂತಿರುವುದು ಸತೀಶ್ ಸೈಲ್ ಗೆಲುವಿಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.
ಸತೀಶ್ ಸೈಲ್ ಅವರಿಗೆ ಆನಂದ್ ಅಸ್ನೋಟಿಕರ್ ಕೊನೆ ಘಳಿಗೆಯಲ್ಲಿ ಬೆಂಬಲ ಘೋಷಣೆ ಮಾಡಿದ್ದರು. ಇದೂ ಕೂಡ ಸತೀಶ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಮೀನುಗಾರರ ದೊಡ್ಡ ಮಟ್ಟದ ಬೆಂಬಲ, ನಿರಂತರ ಪ್ರಚಾರ, ಅಂಕೋಲಾದಲ್ಲಿ ಕಾಂಗ್ರೆಸ್‌ಗೆ ಜನ ಬಲ ಸತೀಶ್ ಸೈಲ್ ಅವರ ಎರಡನೇ ಗೆಲುವಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು, ರೂಪಾಲಿ ನಾಯ್ಕರಿಗೆ ಆಪ್ತರೇ ಮುಳುವಾದಂತಾಗಿದೆ. ಬಿಜೆಪಿಗರ ಒಳ ಜಗಳ, ಆಡಳಿತ ವಿರೋಧಿ ಅಲೆ, ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾಮಗಾರಿ ನಡೆಸದೇ ಇರುವುದು, ಗುತ್ತಿಗೆದಾರರಿಂದ ಪ್ಯಾಕೇಜ್ ಆರೋಪ ಮತ್ತು ಆಪ್ತ ಸಹಾಯಕನ ಅಕ್ರಮ ಆಸ್ತಿ ಆರೋಪಗಳು ಬದಲಾವಣೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.