ಕಾರವಾರ(ಉತ್ತರ ಕನ್ನಡ):ಟ್ಯಾಗೋರ್ ಕಡಲ ತೀರದಲ್ಲಿ ಕೋಸ್ಟ್‌ಗಾರ್ಡ್ ತನ್ನ ಕಚೇರಿ ಸ್ಥಾಪಿಸಲು ಸಾಕಷ್ಟು ಪ್ರಯತ್ನ ಪಟ್ಟಿತ್ತಾದರೂ ಸ್ಥಳೀಯರ ವಿರೋಧದಿಂದ ಸಾಧ್ಯವಾಗಿರಲಿಲ್ಲ. ಇದೀಗ ಕೋಸ್ಟ್‌ಗಾರ್ಡ್‌ನ ನೂತನ ಐಜಿಯಾಗಿ ಕಾರವಾರ ಮೂಲದವರೇ ಆದ ಮನೋಜ್ ಬಾಡ್ಕರ್ ನೇಮಕಗೊಂಡಿದ್ದು ಸ್ಥಳೀಯ ಮೀನುಗಾರರೊಂದಿಗೆ ನಡೆಸಿದ ಸಭೆಯಲ್ಲಿ ಬೀಚ್‌ನಲ್ಲಿ ಕೋಸ್ಟ್‌ಗಾರ್ಡ್ ಕಚೇರಿ ಸ್ಥಾಪನೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಕರಾವಳಿ ನಗರಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಎಂದಾಕ್ಷಣ ಮೊದಲು ನೆನಪಾಗುವುದು ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲ ತೀರ. ಸುಮಾರು 2 ಕಿ.ಮೀಗೂ ಉದ್ದವಿರುವ ವಿಶಾಲ ಕಡಲ ತೀರ ಕಾರವಾರದಲ್ಲಿ ಮಾತ್ರ ಇದ್ದು, ಇದು ಪ್ರವಾಸಿಗರ ನೆಚ್ಚಿನ ತಾಣ. ಜತೆಗೆ ಸ್ಥಳೀಯ ನೂರಾರು ಮೀನುಗಾರರು ಪ್ರತಿನಿತ್ಯ ಮೀನುಗಾರಿಕೆ ನಡೆಸಲು ಇದೇ ಕಡಲ ತೀರವನ್ನು ಅವಲಂಬಿಸಿದ್ದಾರೆ.
ಆದರೆ ಈ ಕಡಲತೀರದಲ್ಲಿ ಕೋಸ್ಟ್‌ಗಾರ್ಡ್ ತನ್ನ ಹೋವರ್‌ಕ್ರಾಫ್ಟ್ ನಿಲುಗಡೆಗೆ ಜಾಗ ಕೇಳಿತ್ತು. ಅದರಂತೆ ಈ ಹಿಂದೆ ಜಿಲ್ಲಾಡಳಿತದ ವತಿಯಿಂದ ಇಲ್ಲಿನ ದಿವೇಕರ್ ವಾಣಿಜ್ಯ ಕಾಲೇಜಿನ ಹಿಂಬದಿಯಲ್ಲಿ 10 ಎಕರೆ ಪ್ರದೇಶವನ್ನ ಮಂಜೂರು ಮಾಡಲಾಗಿತ್ತು. ಆದರೆ ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೋಸ್ಟ್‌ಗಾರ್ಡ್‌ಗೆ ನೀಡಿದ್ದ ಜಾಗವನ್ನ ವಾಪಸ್ ಪಡೆಯಲಾಗಿತ್ತು.
ಮೀನುಗಾರರೊಂದಿಗೆ ಸಭೆ: ಇದೀಗ ಕೋಸ್ಟ್‌ಗಾರ್ಡ್‌ನ ನೂತನ ಐಜಿಯಾಗಿ ಕಾರವಾರ ಮೂಲದವರೇ ಆದ ಮನೋಜ್ ಬಾಡ್ಕರ್ ನೇಮಕಗೊಂಡಿದ್ದು ಸ್ಥಳೀಯ ಮೀನುಗಾರರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಮೀನುಗಾರರ ಅನುಕೂಲದ ದೃಷ್ಟಿಯಿಂದ ಕೋಸ್ಟ್‌ಗಾರ್ಡ್‌ಗೆ ಸಹಕಾರ ನೀಡುವಂತೆ ಕೇಳಿಕೊಂಡಿದ್ದು ಇದರೊಂದಿಗೆ ಕಾರವಾರದ ಟ್ಯಾಗೋರ್ ಬೀಚ್‌ನಲ್ಲಿ ಕೋಸ್ಟ್‌ಗಾರ್ಡ್ ಕಚೇರಿ ಸ್ಥಾಪನೆ ಕುರಿತು ಚರ್ಚೆ ನಡೆಸಿದ್ದಾರೆ.
ಪ್ರವಾಸೋದ್ಯಮಕ್ಕೂ ಪೂರಕ:ಕಡಲ ತೀರದಲ್ಲಿ ಕೇವಲ ಹೋವರ್ ಕ್ರಾಫ್ಟ್ ಕಾರ್ಯಾಚರಣೆಗೆ ಸ್ಥಳಾವಕಾಶದ ಅಗತ್ಯತೆಯಿದ್ದು ಇದರಿಂದ ಮೀನುಗಾರರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಹೋವರ್ ಕ್ರಾಫ್ಟ್ ನಿಲುಗಡೆಯಿಂದ ಪ್ರವಾಸಿಗರಿಗೂ ಆಕರ್ಷಣೆಯಾಗಲಿದ್ದು ಪ್ರವಾಸೋದ್ಯಮಕ್ಕೂ ಪೂರಕವಾಗಿರಲಿದೆ ಎಂದು ಇಂಡಿಯನ್ ಕೋಸ್ಟ್‌ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಮನೋಜ್ ಬಾಡ್ಕರ್ ತಿಳಿಸಿದ್ದಾರೆ.