ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ನಿನ್ನೆಯಿಂದ ಅಬ್ಬರಿಸುತ್ತಿರುವ ಮಳೆ ಆರ್ಭಟವೂ ಬುಧವಾರವೂ ಮುಂದುವರಿದಿದೆ. ಭಾರೀ ಮಳೆಗೆ ಕರಾವಳಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಅಷ್ಟೇ ಅಲ್ಲದೆ ಕಾರವಾರದಲ್ಲಿ ವೃದ್ಧೆಯೊಬ್ಬಳ ಮೃತದೇಹ ಮನೆಯಂಗಳದಲ್ಲಿ ಪತ್ತೆಯಾಗಿದ್ದು, ಮಳೆಗೆ ಇನ್ನಷ್ಟು ಅನಾಹುತಗಳು ಸೃಷ್ಟಿಯಾಗುವ ಭೀತಿ ಇದೀಗ ಎಲ್ಲೆಡೆ ಎದುರಾಗಿದೆ.
ಹೌದು, ಉತ್ತರಕನ್ನಡದ ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಭಾರೀ ಮಳೆಯಾಗಿದೆ. ಮಂಗಳವಾರದಿಂದ ಸುರಿಯುತ್ತಿರುವ ಮಳೆ ಇಂದೂ ಕೂಡ ಮುಂದುವರಿದಿದೆ. ಕಾರವಾರ, ಭಟ್ಕಳ, ಹೊನ್ನಾವರ, ಕುಮಟಾ ಪಟ್ಟಣಗಳ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನ ಪರದಾಡುವಂತಾಗಿದೆ. ನಗರದ ಪದ್ಮನಾಭ ನಗರ, ಸೋನಾರವಾಡ, ಹಬ್ಬುವಾಡದ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿದೆ.
ವೃದ್ಧೆ ಮನೆಯಂಗಳದಲ್ಲಿ ಸಾವು:ಅರಗಾದಲ್ಲಿ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆ ತಾರಾಮತಿ (60) ಎಂಬುವವರು ಮೃತಪಟ್ಟಿದ್ದಾರೆ. ಮನೆಯಲ್ಲಿ ಒಂಟಿಯಾಗಿಯೇ ಇದ್ದ ಈಕೆ ರಾತ್ರಿ ಆರೋಗ್ಯವಾಗಿ ಪಕ್ಕದ ಮನೆಯವರೊಂದಿಗೆ ಮಾತನಾಡಿ ಮಲಗಿದ್ದರು. ಆದರೆ ಬೆಳಗ್ಗೆ ಮನೆಯ ಅಂಗಳದಲ್ಲಿ ನೀರು ತುಂಬಿಕೊಂಡ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕಾಲು ಜಾರಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಡ್ಡ ಕುಸಿಯುವ ಭೀತಿ, ಪೋಸ್ಟ್ ಚೇಂಡಿಯಾ ಗ್ರಾಮಸ್ಥರು ಆತಂಕದಲ್ಲಿ:ಇನ್ನು ಚೆಂಡೀಯಾ, ಅರಗಾ, ಈಡೂರು ಬಳಿ ನೌಕಾನೆಲೆ ಕಾಮಗಾರಿಯಿಂದಾಗಿ ಮಳೆ ನೀರು ಸರಾಗವಾಗಿ ಹರಿಯದೇ ಮನೆಗಳಿಗೆ ನುಗ್ಗಿದೆ. ಅಲ್ಲದೆ ಪೊಸ್ಟ್ ಚೇಂಡಿಯಾ ಬಳಿ ನೌಕಾನೆಲೆಯವರು ನಡೆಸಿದ ರಸ್ತೆ ಕಾಮಗಾರಿ ಬಳಿ ಗುಡ್ಡ ಕುಸಿತವಾಗಿದೆ. ಬಳಿಕ ನೌಕಾನೆಲೆಯವರು ತೆರವುಗೊಳಿಸಿದ್ದು ಗುಡ್ಡದ ಕೇಳಭಾಗದಲ್ಲಿರುವ ಸುಮಾರು 7 ಮನೆಯವರಿಗೆ ಇದೀಗ ಮತ್ತೆ ಗುಡ್ಡ ಕುಸಿತದ ಭೀತಿ ಎದುರಾಗಿದೆ.