ಕಾರವಾರ: ಕೆಂಡದಂತಿರುವ ಉರಿಬಿಸಿಲಿಗೆ ಜನ-ಜಾನುವಾರುಗಳು ಕಂಗಾಲಾಗಿದ್ದಾರೆ. ಪಾರ್ಕ್ ಮಾಡಲಾಗಿದ್ದ ವಾಹನಗಳು ದಿಢೀರ್ ಬೆಂಕಿಗೆ ಆಹುತಿಯಾದ ನಿದರ್ಶನಗಳಿವೆ. ಕಳೆದ ತಿಂಗಳಷ್ಟೇ, ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹೊತ್ತಿದ ಕಿಡಿಯೊಂದು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಆಹುತಿ ಪಡೆದಿತ್ತು. ಈಗ ಬಿಸಿಲಿನ ತಾಪ ಮತ್ತಷ್ಟು ಏರಿಕೆಯಾಗಿದ್ದು, ಕರಾವಳಿ ಭಾಗದಲ್ಲಿ ಕಾಡ್ಗಿಚ್ಚಿನ ಭೀತಿ ಎದುರಾಗಿದೆ.
ಬಂಡೀಪುರ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿದ್ದ ಭಾರಿ ಪ್ರಮಾಣದ ಕಾಡ್ಗಿಚ್ಚು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ನಿರ್ನಾಮ ಮಾಡಿತ್ತು. ಅಷ್ಟೇ ಅಲ್ಲ, ಬೆಂಕಿಯ ಕೆನ್ನಾಲಿಗೆಗೆ ವನ್ಯಮೃಗಗಳೂ ಪ್ರಾಣ ಕಳೆದುಕೊಂಡಿದ್ವು. ಸದ್ಯ ಎಲ್ಲೆಡೆ ಬಿಸಿಲಿನ ಪ್ರಖರತೆ ಜೋರಾಗಿದ್ದು, ಸೂರ್ಯನಿಗೆ ಮೈಯೊಡ್ಡಿ ಬದುಕಲಾಗದ ಪರಿಸ್ಥಿತಿ ಇದೆ. ಅದ್ರಲ್ಲೂ, ಕರಾವಳಿಯಾದ್ಯಂತ ಕಳೆದೆರಡು ತಿಂಗಳಿಂದ ಅಬ್ಬಾ, ಸೂರ್ಯನ ತಾಪಕ್ಕೆ ಜನ ಬಸವಳಿದಿದ್ದರೆ, ಇಲ್ಲಿನ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಗಿಡಮರಗಳು ಒಣಗಿ ನಿಂತಿವೆ. ಹೀಗಾಗಿ ಕಾಡ್ಗಿಚ್ಚಿನ ಆತಂಕ ಮನೆ ಮಾಡಿದೆ.