ಕಾರವಾರ :ಕರಾವಳಿ ಅಂದ್ರೆ ಸಾಮಾನ್ಯವಾಗಿ ಅತೀ ಸೂಕ್ಷ್ಮ ಪ್ರದೇಶವೆಂದೇ ಗುರುತಿಸಲಾಗುತ್ತದೆ. ಅದರಲ್ಲೂ ನೌಕಾನೆಲೆ, ಅಣುವಿದ್ಯುತ್ ಸ್ಥಾವರವನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಸಮುದ್ರ ಮಾರ್ಗದಲ್ಲಿ ನುಸುಳುಕೋರರು ನುಸುಳುವ ಸಾಧ್ಯತೆಗಳಿರುವುದರಿಂದ ಬಿಗಿ ಭದ್ರತೆ ಕೂಡ ಅಷ್ಟೆ ಅವಶ್ಯಕವಾಗಿರುತ್ತದೆ. ಹೀಗಾಗಿ ಇಂತಹ ಸ್ಥಳಗಳಲ್ಲಿ ಭದ್ರತೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಮತ್ತು ತುರ್ತು ಸಂದರ್ಭಗಳನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎನ್ನುವುದನ್ನು ಅಭ್ಯಾಸ ಮಾಡಲು ಕರಾವಳಿಯಲ್ಲಿ ಎರಡು ದಿನದ ಸಾಗರ ಕವಚ ಅಣಕು ಕಾರ್ಯಾಚರಣೆ ನಡೆಯುತ್ತಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಹೌದು, ಜಿಲ್ಲೆಯ ಕರಾವಳಿ ಭಾಗದ ಭದ್ರತೆ ದೃಷ್ಟಿಯಿಂದ ರಾಜ್ಯ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ತಟರಕ್ಷಕ ದಳ ಹಾಗೂ ಭಾರತೀಯ ನೌಕಾಸೇನೆ ವತಿಯಿಂದ ಸಾಗರ ಕವಚ ಅಣುಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ವಾಹನಗಳಲ್ಲಿ ಬರುವ ಶಂಕಿತರನ್ನು ಹಿಡಿಯುವುದು ಈ ಕಾರ್ಯಾಚರಣೆ ಪ್ರಮುಖ ಉದ್ದೇಶ.
ಈ ನಿಟ್ಟಿನಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧೆಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಜಿಲ್ಲೆಯ ಒಳಗೆ ಹಾಗೂ ಹೊರಗೆ ಹೋಗುವ ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತದೆ. ಈ ವೇಳೆ ನಕಲಿ ಉಗ್ರರು ಪೊಲೀಸರ ಕಣ್ತಪ್ಪಿಸಿ ಜಿಲ್ಲೆಯ ಒಳಪ್ರವೇಶಿಸದಂತೆ ತಡೆಯುವುದು ಭದ್ರತಾ ಸಿಬ್ಬಂದಿ ಕಾರ್ಯವಾಗಿದ್ದು, ಭದ್ರತಾ ಸಿಬ್ಬಂದಿಯೇ ನಕಲಿ ಉಗ್ರರ ವೇಷದಲ್ಲಿ ಜಿಲ್ಲೆಯನ್ನು ಪ್ರವೇಶಿಸುವ ಪ್ರಯತ್ನ ನಡೆಸುತ್ತಾರೆ. ಈ ಮೂಲಕ ತುರ್ತು ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.