ಕರ್ನಾಟಕ

karnataka

ETV Bharat / state

ಕೋಸ್ಟ್ ಗಾರ್ಡ್​ಗೆ ಕೊನೆಗೂ ದಕ್ಕಿದ ಜಟ್ಟಿ: ₹80 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ತೀರ್ಮಾನ - ಪಶ್ಚಿಮ ವಲಯ ಕಮಾಂಡರ್ ಮನೋಜ್ ಬಾಡ್ಕರ್

ಕೆಲವೊಮ್ಮೆ ವಾಣಿಜ್ಯ ಹಡಗುಗಳು ಆಗಮಿಸಿದ ಸಂದರ್ಭದಲ್ಲಿ ಬೋಟ್​ ನಿಲ್ಲಿಸಲು ಕೋಸ್ಟ್‌ಗಾರ್ಡ್ ತೊಂದರೆ ಅನುಭವಿಸಬೇಕಾದ ಪ್ರಸಂಗಗಳು ನಡೆದಿದೆ. ಇದೆಲ್ಲವನ್ನು ಅರಿತ ಕೋಸ್ಟ್ ಗಾರ್ಡ್ ಕಾರವಾರ ಬಂದರು ಪ್ರದೇಶದ ಅಲೆತಡೆಗೋಡೆ ಬಳಿ ಖಾಲಿ ಜಾಗದಲ್ಲಿ ಪ್ರತ್ಯೇಕ ಜಟ್ಟಿ ನಿರ್ಮಿಸಿಕೊಳ್ಳಲು ಅನುಮತಿ ನೀಡಿದೆ.

approved to construct a jetty at karwar
ಕಾರವಾರದ ಕಡಲ ತೀರ

By

Published : Nov 23, 2022, 10:37 AM IST

ಕಾರವಾರ:ರಾಜ್ಯದ ಕರಾವಳಿ ತೀರದ ರಕ್ಷಣೆಯಲ್ಲಿ ಕೋಸ್ಟ್‌ಗಾರ್ಡ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮುಂಬೈನಲ್ಲಿ ನಡೆದಿದ್ದ ಉಗ್ರರ ದಾಳಿಯ ನಂತರ ಕರಾವಳಿಯ ಭದ್ರತೆ ಕುರಿತು ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೀನುಗಾರರ ರಕ್ಷಣೆಯ ಜತೆಗೆ ಕರಾವಳಿಯಲ್ಲಿ ಕೋಸ್ಟ್‌ಗಾರ್ಡ್ ಭದ್ರತೆಯನ್ನು ವಹಿಸುತ್ತದೆ. ಆದರೆ ಇಷ್ಟೆಲ್ಲ ಪ್ರಾಮುಖ್ಯತೆ ಇದ್ದರೂ ಸಹ ಕಾರವಾರದಲ್ಲಿ ಸ್ಥಾಪಿತವಾಗಿರುವ ಕೋಸ್ಟ್‌ಗಾರ್ಡ್‌ಗೆ ತನ್ನದೇ ಆದ ಸ್ಥಳ ಇಲ್ಲದ್ದರಿಂದ ವಾಣಿಜ್ಯ ಬಂದರಿನಲ್ಲಿ ತನ್ನ ಹಡಗುಗಳನ್ನ ನಿಲ್ಲಿಸಬೇಕಾಗಿತ್ತು. ಇದೀಗ ಕೋಸ್ಟ್‌ಗಾರ್ಡ್ ಜಟ್ಟಿ ನಿರ್ಮಿಸಲು ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಜಾಗ ಲಭ್ಯವಾಗಿದೆ.

ಕಳೆದ 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ದಾಳಿಯಲ್ಲಿ ಉಗ್ರರು ಕಡಲ ಮಾರ್ಗದ ಮೂಲಕ ಒಳನುಸುಳಿದ್ದ ಹಿನ್ನೆಲೆಯಲ್ಲಿ ತೀರ ಪ್ರದೇಶದ ಭದ್ರತೆ ಪ್ರಾಮುಖ್ಯತೆ ಪಡೆದಿತ್ತು. ಈ ನಿಟ್ಟಿನಲ್ಲಿ ದೇಶದ ಕರಾವಳಿ ತೀರದಲ್ಲಿ ಕಣ್ಗಾವಲಿಡಲು ಕರಾವಳಿ ತಟ ರಕ್ಷಣಾ ಪಡೆಯನ್ನ ಸ್ಥಾಪನೆ ಮಾಡಿದ್ದು ದೇಶದ ಕರಾವಳಿಯುದ್ದಕ್ಕೂ ಭದ್ರತೆಯನ್ನು ನೋಡಿಕೊಳ್ಳುತ್ತಿದೆ.

ಕಾರವಾರದಲ್ಲಿ ಕೋಸ್ಟ್‌ಗಾರ್ಡ್ ಜಟ್ಟಿ ನಿರ್ಮಾಣಕ್ಕೆ ಸರ್ಕಾರ ಅಸ್ತು..

ಕೋಸ್ಟ್‌ಗಾರ್ಡ್ ಜಟ್ಟಿ ನಿರ್ಮಾಣಕ್ಕೆ ಸರ್ಕಾರ ಅಸ್ತು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಒಂದಾಗಿರುವ ಕಾರವಾರದಲ್ಲಿಯೂ ಸಹ ಕೋಸ್ಟ್‌ಗಾರ್ಡ್ ತನ್ನ ಕೇಂದ್ರವನ್ನ ಹೊಂದಿದ್ದು, ನೌಕಾನೆಲೆಯಂತೆ ಕಾರ್ಯನಿರ್ವಹಿಸುತ್ತಿದೆ. ಆದರೆ ಇಷ್ಟು ವರ್ಷ ಕಳೆದರೂ ಸಹ ಕೋಸ್ಟ್‌ಗಾರ್ಡ್ ಹಡಗುಗಳನ್ನ ನಿಲ್ಲಿಸಲು ಸ್ವಂತ ಜಾಗವನ್ನು ಹೊಂದಿಲ್ಲವಾಗಿದ್ದು ಇದರಿಂದಾಗಿ ವಾಣಿಜ್ಯ ಬಂದರಿನಲ್ಲೇ ಬೋಟ್​​ಗಳನ್ನ ನಿಲ್ಲಿಸಲಾಗುತ್ತಿತ್ತು.

ಕೆಲವೊಮ್ಮೆ ವಾಣಿಜ್ಯ ಹಡಗುಗಳು ಆಗಮಿಸಿದ ಸಂದರ್ಭದಲ್ಲಿ ಬೋಟ್​​ ನಿಲ್ಲಿಸಲು ಕೋಸ್ಟ್‌ಗಾರ್ಡ್ ತೊಂದರೆ ಅನುಭವಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಬಂದರು ಪ್ರದೇಶದ ಅಲೆತಡೆಗೋಡೆ ಬಳಿ ಪ್ರತ್ಯೇಕ ಜಟ್ಟಿ ನಿರ್ಮಿಸಿಕೊಳ್ಳಲು ಕೋಸ್ಟ್‌ಗಾರ್ಡ್ ಬೇಡಿಕೆಯಿಟ್ಟಿದ್ದು, ಇದೀಗ ಅನುಮತಿ ಸಿಕ್ಕಿದೆ. ಈಗಾಗಲೇ ಜಾಗದ ಪರಿಶೀಲನೆ ನಡೆಸಲಾಗಿದ್ದು, ಅಲೆತಡೆಗೋಡೆಯ ಪಕ್ಕದ ದ್ವೀಪಕ್ಕೆ ಹೊಂದಿಕೊಂಡು ಕೋಸ್ಟ್‌ಗಾರ್ಡ್ ಜಟ್ಟಿ ನಿರ್ಮಾಣವಾಗಲಿದೆ.

'ಬಂದರು ಪ್ರದೇಶದ ಬ್ರೇಕ್ ವಾಟರ್ ವ್ಯಾಪ್ತಿಯಲ್ಲಿ ನೂತನ ಕೋಸ್ಟ್‌ಗಾರ್ಡ್ ಜಟ್ಟಿ ನಿರ್ಮಾಣವಾಗಲಿದೆ. ಸದ್ಯ ಬಂದರು ಪ್ರದೇಶದಲ್ಲೇ ಕೋಸ್ಟ್‌ಗಾರ್ಡ್ ಬೋಟುಗಳು ಲಂಗರು ಹಾಕುತ್ತಿರುವುದರಿಂದಾಗಿ ವಾಣಿಜ್ಯ ಚಟುವಟಿಕೆಗಳಿಂದಾಗಿ ಕೋಸ್ಟ್ ಗಾರ್ಡ್ ಬೋಟು ನಿಲುಗಡೆಗೆ ಸಮಸ್ಯೆಯಾಗುತ್ತಿತ್ತು. ಪಕ್ಕದಲ್ಲೇ ಮೀನುಗಾರಿಕಾ ಬಂದರು ಸಹ ಇರುವುದರಿಂದಾಗಿ ಕೋಸ್ಟ್‌ಗಾರ್ಡ್ ಬೋಟುಗಳಿಗೆ ಲಂಗರು ಹಾಕುವುದೇ ದೊಡ್ಡ ಸಮಸ್ಯೆಯಾಗಿತ್ತು. ಇದೀಗ ಪ್ರತ್ಯೇಕ ಜಟ್ಟಿ ನಿರ್ಮಾಣವಾಗುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಜಟ್ಟಿ ಕಾಮಗಾರಿ ನಡೆಯಲಿವೆ' ಎಂದು ಪಶ್ಚಿಮ ವಲಯ ಕಮಾಂಡರ್ ಮನೋಜ್ ಬಾಡ್ಕರ್ ತಿಳಿಸಿದ್ದಾರೆ.

ಕೋಸ್ಟ್‌ಗಾರ್ಡ್ ಪ್ರತ್ಯೇಕ ಜಟ್ಟಿ ನಿರ್ಮಾಣವನ್ನ ಸಾರ್ವಜನಿಕರು ಸಹ ಸ್ವಾಗತಿಸಿದ್ದಾರೆ. ಇದರೊಂದಿಗೆ ಟ್ಯಾಗೋರ್ ಕಡಲ ತೀರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೋವರ್ ಕ್ರಾಫ್ಟ್ ನಿಲುಗಡೆಯನ್ನೂ ಸಹ ಬ್ರೇಕ್ ವಾಟರ್ ಬಳಿಯೇ ವರ್ಗಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಟ್ಯಾಗೋರ್ ಕಡಲ ತೀರದಲ್ಲಿ ಹೋವರ್‌ ಕ್ರಾಫ್ಟ್‌ ನಿಲುಗಡೆ: ಬೀಚ್​ನಲ್ಲಿ ಅವಕಾಶ ನೀಡಲ್ಲ- ಮೀನುಗಾರರು

ABOUT THE AUTHOR

...view details