ಕಾರವಾರ: ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಸಾವನ್ನಪ್ಪಿರುವ ಮತ್ತು ಭಾರಿ ಮಳೆಯಿಂದಾಗಿ ನೂರಾರು ಮನೆಗಳು ಮುಳುಗಡೆಯಾಗಿ ಹಾನಿಗೊಳಗಾದ ಉತ್ತರಕನ್ನಡ ಜಿಲ್ಲೆಯ ಭಟ್ಕಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತುರ್ತಾಗಿ ಭೇಟಿ ನೀಡಲಿದ್ದಾರೆ.
ನಗರದ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿರುವ ಸಿಎಂ, ಮಧ್ಯಾಹ್ನ 1.40 ಕ್ಕೆ ಗೋವಾ ತಲುಪಲಿದ್ದು, ಅಲ್ಲಿನ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಆಗಮಿಸಲಿದ್ದಾರೆ.
ಇದನ್ನೂ ಓದಿ:ಶ್ರವಣ ಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿ ಕಲ್ಲು ಕುಸಿತ: ತಪ್ಪಿದ ಅನಾಹುತ
ಸಂಜೆ 4 ಗಂಟೆ ಸುಮಾರಿಗೆ ಮೇಘ ಸ್ಫೋಟದಿಂದ ಮುಠ್ಠಳ್ಳಿಯಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದು, ನಾಲ್ವರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಲಿದ್ದಾರೆ. ಬಳಿಕ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.
ಸಂಜೆ 6 ಗಂಟೆವರೆಗೂ ಮಳೆಹಾನಿ ಕುರಿತು ಸಿಎಂ ಪರಿಶೀಲನೆ ನಡೆಸಲಿದ್ದು, ನಂತರ ರಸ್ತೆ ಮಾರ್ಗದ ಮೂಲಕ ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ರಾತ್ರಿ 10 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ವಾಪಸಾಗಲಿದ್ದಾರೆ. ಮುಖ್ಯಮಂತ್ರಿ ಜೊತೆ ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಹಲವು ಸಚಿವರು ಆಗಮಿಸುತ್ತಿರುವುದಾಗಿ ಆಪ್ತ ಕಾರ್ಯದರ್ಶಿ ಬಿ.ಪಿ ಚನ್ನಬಸವೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಮಂಡ್ಯದಲ್ಲಿ ಧಾರಾಕಾರ ಮಳೆಗೆ ಗ್ರಾಮಗಳು ಜಲಾವೃತ.. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್