ಕಾರವಾರ: ಉತ್ತರ ಕನ್ನಡದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾನಿಗೊಳಗಾದ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ 200 ಕೋಟಿ ರೂ ಘೋಷಿಸಿದ್ದಾರೆ. ಜತೆಗೆ ಹಾನಿಗೊಳಗಾದ ಮನೆಗಳಿಗೆ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
ಯಲ್ಲಾಪುರ ಹಾಗು ಅಂಕೋಲಾ ಭಾಗದ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಬಳಿಕ ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ಅಧಿಕಾರಿಗಳೊಂದಿಗೆ ಪ್ರವಾಹ ಹಾನಿ ಕುರಿತು ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಹಾನಿಗೊಳಗಾದ ಮನೆ, ರಸ್ತೆ, ಗ್ರಾಮಗಳು, ವಿದ್ಯುತ್ ಹಾಗೂ ಆಸ್ತಿ ಪಾಸ್ತಿಗಳ ಬಗ್ಗೆ ಮಾಹಿತಿ ಪಡೆದ ಅವರು ಬಳಿಕ ಪರಿಹಾರ ಘೋಷಣೆ ಮಾಡಿದ್ದಾರೆ.
ಪ್ರಮುಖವಾಗಿ ಜಿಲ್ಲೆಯಲ್ಲಿ ಹಾನಿಗೊಳಗಾದ ಪಿಡಬ್ಲ್ಯೂಡಿ ರಸ್ತೆಗೆ 100 ಕೋಟಿ, ಆರ್‌ಡಿಪಿಆರ್ ರಸ್ತೆಗೆ 100 ಕೋಟಿ ಹಣ ತುರ್ತು ಬಿಡುಗಡೆಗೊಳಿಸಲಾಗುವುದು. ಮನೆ ಕಳೆದುಕೊಂಡ ಅತಿಕ್ರಮಣದಾರರೂ ಸೇರಿ ಮನೆ ಹಾನಿಗೆ ಕಳೆದ ಬಾರಿಯಂತೆ 10 ಸಾವಿರ ರೂ. ತುರ್ತು ಪರಿಹಾರವನ್ನು ಅಗತ್ಯ ವಸ್ತುಗಳ ಖರೀದಿಗೆ ನೀಡಲು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ಗೆ ಸೂಚನೆ ನೀಡಿದರು.