ಶಿರಸಿ:ಶಿವರಾಮ ಹೆಬ್ಬಾರ್ ಈಗಾಗಲೇ ಯಲ್ಲಾಪುರ ಕ್ಷೇತ್ರದಲ್ಲಿ ಗೆದ್ದಾಗಿದೆ. ಎಷ್ಟು ಅಂತರದಿಂದ ಗೆಲ್ಲಬೇಕು ಎನ್ನಲು ಶ್ರಮ ವಹಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರಕ್ಕೆ ಬನವಾಸಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದ ಅನಂತಕುಮಾರ ಹೆಗಡೆ ಸೇರಿ ಎಲ್ಲಾ ಮುಖಂಡರು ಅವರ ಜೊತೆಯಲ್ಲಿ ಇರುವ ಕಾರಣ ಗೆಲುವು ನಿಶ್ಚಿತ ಎಂದರು.
ಕೇವಲ ಈ ಕ್ಷೇತ್ರ ಎಂದಲ್ಲ, ಎಲ್ಲಾ 15 ಕ್ಷೇತ್ರದಲ್ಲೂ ಬಹುದೊಡ್ಡ ಗೆಲುವನ್ನು ಸಾಧಿಸುತ್ತೇವೆ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ನಾವು 20-22 ಸ್ಥಾನ ಗೆಲ್ಲುತ್ತೇವೆ ಎಂದಾಗ ಕಾಂಗ್ರೆಸ್ ಜೆಡಿಎಸ್ ತಮಾಷೆ ಮಾಡಿದ್ದರು. ಮಾಧ್ಯಮದವರು ನಂಬಿರಲಿಲ್ಲ. ಆದರೆ, ನಾವು 26 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದೆವು. ಅದೇ ರೀತಿ ನಾನು ಎಲ್ಲಾ ಕ್ಷೇತ್ರದಲ್ಲಿ ಎರಡು ಕಡೆ ಪ್ರಚಾರ ನಡೆಸುತ್ತೇನೆ. ಎಲ್ಲಾ ಕಡೆ ಗೆಲ್ಲುತ್ತೇವೆ ಎಂದರು.
ಯಲ್ಲಾಪುರ ಕ್ಷೇತ್ರದ ಬನವಾಸಿಗೆ ಆಗಮಿಸಿದ ಸಿಎಂ ಯಡಿಯೂರಪ್ಪ.. ಚುನಾವಣೆ ನಂತರ ರಾಜ್ಯದ ಸಂಪೂರ್ಣ ಅಭಿವೃದ್ಧಿ ಕಡೆ ಗಮನ ಕೊಡುತ್ತೇವೆ. ಮೊದಲು ಅತಿವೃಷ್ಟಿಯಿಂದ ತತ್ತರಿಸಿದ ಜನರ ಕಡೆ ಗಮನ ನೀಡಿದೆವು. ಮುಂದೆ ಸಮಗ್ರ ಅಭಿವೃದ್ಧಿ ಕಡೆ ಗಮನ ನೀಡುತ್ತೇವೆ. ಶಿವರಾಮ ಹೆಬ್ಬಾರ್ ಅವರಂತಹ 17 ಜನ ಶಾಸಕರು ರಾಜೀನಾಮೆ ನೀಡದಿದ್ದಲ್ಲಿ ಸರ್ಕಾರ ರಚನೆ ಆಗುತ್ತಿರಲಿಲ್ಲ. ಅದನ್ನು ಉಳಿಸಿಕೊಂಡು ಹೋಗುತ್ತೇವೆ. ಅಲ್ಲದೇ ಶಿವರಾಮ ಹೆಬ್ಬಾರ್ ಸಹ ಗೆದ್ದು ಸಚಿವರಾಗುತ್ತಾರೆ ಎಂದರು.
ಸಿದ್ದರಾಮಯ್ಯನವರಿಗೆ ಸೋಲು ನಿಶ್ಚಿತ ಎನ್ನುವುದು ತಿಳಿದಿದೆ. ಸುಖಾ ಸುಮ್ಮನೆ ಆರೋಪ ಮಾಡಿದಲ್ಲಿ ಜನ ಏನು ತಿಳಿಯುತ್ತಾರೆ ಎನ್ನುವುದು ಗೊತ್ತಿಲ್ಲ. ಡಿ.9 ರಂದು ಉತ್ತರ ನೀಡುತ್ತೇನೆ. ಮುಂದೆ ಹಗುರ ಮಾತುಗಳನ್ನು ಆಡುವಾಗ ವಿಚಾರ ಮಾಡಬೇಕು ಎಂದರು.