ಕಾರವಾರ: ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಚತಾ ಅಭಿಯಾನವೊಂದರಲ್ಲಿ ಸ್ವಚ್ಚತೆಗಿಂತ ಸಮಾರಂಭವೇ ದೊಡ್ಡದಾಗಿ ಕೊನೆಗೆ ಕಾಟಾಚಾರದಲ್ಲಿ ಸಮಾಪ್ತಿಗೊಂಡಿರುವ ಘಟನೆ ಜಿಲ್ಲಾ ಕೇಂದ್ರ ಕಾರವಾರದಲ್ಲಿ ನಡೆದಿದೆ.
ಸ್ವಚ್ಚತೆಗೆ ಬಂದು ಸಮಾರಂಭದಲ್ಲಿ ಬಸವಳಿದ ಜನ ನಗರದ ಮಹತ್ಮಾ ಗಾಂಧೀಜಿ ಉದ್ಯಾನವನದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನೂತನ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಬಳಿಕ ಜಿಲ್ಲಾಡಳಿತ, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಾ ಅಭಿಯಾನ ರಥಕ್ಕೆ ಚಾಲನೆ ನೀಡಿದರು. ನಂತರ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಆಯೋಜಿಸಿದ್ದ ಸಭಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಆದರೆ ಪ್ರತಿ ವರ್ಷ ಶಿಷ್ಟಾಚಾರಕ್ಕೆ ಎಂಬಂತೆ ನಡೆಯುತ್ತಿದ್ದ ಸಭಾ ಕಾರ್ಯಕ್ರಮ ಈ ಭಾರಿ ಗಂಟೆಗಟ್ಟಲೇ ನಡೆದು ಸ್ವಚ್ಚತೆ ನೆಪಮಾತ್ರಕ್ಕೆ ಎಂಬಂತಾಗಿತ್ತು. ಸ್ವಚ್ಚತೆಗೆಂದು ಬಂದವರು ಬಿಸಿಲಲ್ಲಿ ಬಸವಳಿದು ಕೊನೆಗೆ ನೆರಳನ್ನು ಅರಸಿ ಹೋಗುತ್ತಿದ್ದಂತೆ ಭಾಷಣ ಮೊಟಕುಗೊಳಿಸಿ ಸ್ವಚ್ಚತೆಗೆ ಮುಂದಾಗಿದ್ದಾರೆ.
ಆದರೆ ಅಷ್ಟರಲ್ಲಾಗಲೇ ನಿಂತು ಸುಸ್ತಾಗಿದ್ದ ಸಾರ್ವಜನಿಕರು, ಸಂಘ ಸಂಸ್ಥೆಯವರು, ಸೇರಿದಂತೆ ಅಧಿಕಾರಿಗಳು ಕಡಲತೀರದುದ್ದಕ್ಕೂ ಸ್ವಚ್ಚ ಮಾಡುವ ಪ್ರಯತ್ನ ನಡೆಸಿದರು. ವಾರದ ಹಿಂದೆ ನಡೆದ ಅಭಿಯಾನವೊಂದರಲ್ಲಿ ಸ್ವಚ್ಚಗೊಳಿಸಿದ ಕಡಲ ತೀರದಲ್ಲಿಯೇ ಸ್ವಚ್ಚಗೊಳಿಸಿ ಕಾಟಾಚಾರಕ್ಕೆ ಸ್ವಚ್ಚತಾ ಅಭಿಯಾನ ನಡೆಸಲಾಗಿದೆ. ಅಲ್ಲದೆ ಬೀಚ್ ಸ್ವಚ್ಚಗೊಳಿಸಲು ಯಂತ್ರ ಕೂಡ ಇದೆ. ಕೇವಲ ತೋರಿಕೆ ಎಂಬಂತೆ ಅಭಿಯಾನ ನಡೆಸಲಾಗಿದೆ ಎಂದು ಅಭಿಯಾನದಲ್ಲಿ ಪಾಲ್ಗೊಂಡವರೇ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡುಬಂತು.
ಗಾಂಧಿ ಜಯಂತಿ ಹಾಗೂ ಸ್ವಚ್ಚತಾ ಅಭಿಯಾನ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಮಹಾತ್ಮ ಗಾಂಧೀಜಿ ಅಹಿಂಸಾತ್ಮಕ ಹೋರಾಟದ ಮೂಲಕವೇ ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕಿದೆ. ಗಾಂಧೀಜಿ ಕಂಡ ಕನಸು ಎಪ್ಪತ್ತು ವರ್ಷದಲ್ಲಾಗದ್ದನ್ನು ಇಂದು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ಸ್ವಚ್ಚತೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.