ಕಾರವಾರ:ಕುಟುಂಬದ ಎಲ್ಲಾ ಸದಸ್ಯರು ಕೋವಿಡ್ ಸೋಂಕಿಗೆ ಒಳಗಾದಾಗ ಮಕ್ಕಳು ಕುಟುಂಬಸ್ಥರಿಂದ ದೂರ ಇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ. ಇಂತಹ ಮಕ್ಕಳಿಗೆ ಅಗತ್ಯ ನೆರವು ನೀಡಿ, ಪುನರ್ವಸತಿ ಕಲ್ಪಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಿಯಾಂಗ ಎಂ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯ ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಸಂಕಷ್ಟಕ್ಕೆ ಒಳಗಾಗುವ ಮಕ್ಕಳ ಸಂಖ್ಯೆಯು ಹೆಚ್ಚಿರುತ್ತದೆ. ಆದ್ದರಿಂದ ಮಕ್ಕಳ ಸಹಾಯವಾಣಿ ಸಂಖ್ಯೆ 1098ನ್ನು ಹೆಚ್ಚು ಪ್ರಚಾರಗೊಳಿಸಿ ಮತ್ತು ಇದು ದಿನದ 24 ಗಂಟೆಯು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಜನತಾ ಕರ್ಫ್ಯೂ ಸಂದರ್ಭದಲ್ಲಿ ಬಾಲ್ಯವಿವಾಹ ನಡೆಯುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ನಿಗಾ ಇಡಬೇಕು. ಶಾಲೆಗಳಿಗೆ ರಜೆ ಇರುವುದರಿಂದ ಶಾಲಾ ಮಕ್ಕಳು ಬಾಲ ಕಾರ್ಮಿಕರಾಗುವ ಸನ್ನಿವೇಶ ಕೂಡ ಇರುವುದರಿಂದ ಬಾಲ ಕಾರ್ಮಿಕರ ಬಗ್ಗೆಯೂ ಗಮನ ಕೊಡಬೇಕು. ಇಂತಹ ಮಕ್ಕಳ ಮಾಹಿತಿ ತಿಳಿದುಬಂದಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು ಮಕ್ಕಳು ಆಪ್ತ ಸಮಾಲೋಚನೆ ಬಯಸಿದಲ್ಲಿ 14499 ಅನ್ನು ಸಂಪರ್ಕಿಸಬಹುದಾಗಿದೆ. ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಭೆ ನಡೆಸಿ, ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಹೇಳಿದರು.