ಕಾರವಾರ: ಗಂಟಲಿನಲ್ಲಿ ಶೇಂಗಾ ಬೀಜ ಸಿಕ್ಕಿ ಅಸುನೀಗಿದ್ದ ಮಗುವೊಂದನ್ನು ದೇವರ ಮುಂದಿಟ್ಟು ಬದುಕಿಸಿಕೊಡುವಂತೆ ಅಜ್ಜಿಯೋರ್ವಳು ಗೋಗರೆದ ಹೃದಯವಿದ್ರಾವಕ ಘಟನೆ ಯಲ್ಲಾಪುರ ಪಟ್ಟಣದ ಗಣಪತಿ ಗಲ್ಲಿಯಲ್ಲಿ ನಡೆದಿದೆ.
ಗಣಪತಿ ಗಲ್ಲಿಯ ರಾಮನಾಥ ಆಚಾರಿ ಎಂಬುವವರ ಎರಡೂವರೆ ವರ್ಷದ ಸಾತ್ವಿಕ್ ಮನೆಯಲ್ಲಿ ಮಂಗಳವಾರ ಸಂಜೆ ಶೇಂಗಾ ಬೀಜಗಳನ್ನು ತಿನ್ನುತ್ತಿದ್ದಾಗ ಆಕಸ್ಮಿಕವಾಗಿ ಅದು ಗಂಟಲಲ್ಲಿ ಸಿಲುಕಿಕೊಂಡಿತು. ಇದರಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಮನೆಯವರು ಏನೇನೋ ಪ್ರಯತ್ನ ನಡೆಸಿ ಮಗವಿನ ಗಂಟಲಿನಿಂದ ಎರಡು ಶೇಂಗಾ ಬೀಜಗಳನ್ನು ಹೊರ ತೆಗೆದಿದ್ದರು.
ಆದರೂ ಉಸಿರಾಟ ಸುಧಾರಿಸದ ಕಾರಣ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದರು.ಅಲ್ಲಿನ ವೈದ್ಯರು ಇನ್ನೂ ಒಂದು ಶೇಂಗಾ ಬೀಜವನ್ನು ಹೊರತೆಗೆದರು. ಆದರೆ, ಅಷ್ಟರಲ್ಲಿ ಮಗುವಿನ ಉಸಿರು ನಿಂತಿತ್ತು. ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸುತ್ತಿದ್ದಂತೆ ತಾಯಿ ಮತ್ತು ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು.