ಕಾರವಾರ:ಅವರು ಡ್ಸಾನ್ಸ್ ಗ್ರೂಪ್ ಮಾಡಿಕೊಂಡು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಾ ತಮ್ಮ ಕಲೆ ಪ್ರದರ್ಶಿಸುತ್ತಿದ್ದ ವಿದ್ಯಾರ್ಥಿಗಳು. ಅದರಂತೆ ಕಾರವಾರದಲ್ಲಿ ನಡೆದ ಕರಾವಳಿ ಹಬ್ಬದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಡ್ಯಾನ್ಸ್ ಕಾಂಪಿಟೇಶನ್ ನಲ್ಲಿ ಪ್ರದರ್ಶನ ನೀಡಿ 50 ಸಾವಿರದ ಪ್ರಥಮ ಬಹುಮಾನವನ್ನೂ ಪಡೆದುಕೊಂಡಿದ್ದರು. ಇದಾದ ಬಳಿಕ ಬಹುಮಾನದ ಚೆಕ್ ಅನ್ನು ಡ್ರಾ ಮಾಡಿಕೊಳ್ಳಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ಶಾಕ್ ಆಗಿದೆ. ಬಹುಮಾನವಾಗಿ ನೀಡಿದ್ದ ಚೆಕ್ ನಾಲ್ಕು ಬಾರಿ ಬೌನ್ಸ್ ಆಗಿದ್ದು, ಸಂಘಟಕರಿಂದಲೂ ಯಾವುದೇ ಪ್ರತಿಕ್ರಿಯೆ ಸಿಗದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ದಿ ಯುನಿಟಿ ಕ್ರಿವ್ ಹೆಸರಿನ ಗೋವಾ ಮೂಲದ ಡ್ಯಾನ್ಸ್ ತಂಡದವರು ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಇದೇ ವರ್ಷ ಏಪ್ರಿಲ್‌ನಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ತಾಂಡವ ಕಲಾನಿಕೇತನ ಎಂಬ ಸಂಸ್ಥೆ ಕರಾವಳಿ ಹಬ್ಬ ಕಾರ್ಯಕ್ರಮವನ್ನ ಆಯೋಜಿಸಿತ್ತು. ಇದೇ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಡ್ಯಾನ್ಸ್ ಕಾಂಪಿಟೇಶನ್ ನಡೆಸಿದ್ದು ಇದರಲ್ಲಿ ಭಾಗವಹಿಸಿದ್ದ ಹಲವು ತಂಡಗಳ ಪೈಕಿ ದಿ ಯುನಿಟಿ ಕ್ರಿವ್ ತಂಡ ಪ್ರಥಮ ಸ್ಥಾನ ಗಳಿಸಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ನಿಗದಿಯಂತೆ ಗೆದ್ದ ತಂಡಕ್ಕೆ 50 ಸಾವಿರ ರೂಪಾಯಿ ಬಹುಮಾನದ ಚೆಕ್‌ನ್ನು ವಿತರಿಸಿದ್ದು ಡ್ಯಾನ್ಸ್ ಗ್ರೂಪ್ ತಂಡದವರು ಖುಷಿಯಲ್ಲಿ ತೆರಳಿದ್ದರು.
ಮೊದಲ ಬಾರಿಗೆ ಬಹುಮಾನವಾಗಿ ಪಡೆದಿದ್ದ ಚೆಕ್‌ನ್ನ ಬ್ಯಾಂಕ್‌ಗೆ ಹಾಕಿದ್ದರು. ಆಗ ಅದು ಬೌನ್ಸ್ ಆಗಿತ್ತು. ಈ ವೇಳೆ ಕಾರ್ಯಕ್ರಮ ಆಯೋಜಿಸಿದ್ದ ತಾಂಡವ ಕಲಾನಿಕೇತನ ಸಂಸ್ಥೆಯ ಮಂಜುನಾಥ ನಾಯ್ಕ ಎನ್ನುವವರನ್ನ ವಿದ್ಯಾರ್ಥಿಗಳು ಸಂಪರ್ಕಿಸಿದ್ದರು. ಆಗ ಮಂಜುನಾಥ ನಾಯ್ಕ ಅವರು ನೀವು ಚೆಕ್ ಹಾಕಿ, ನಾವು ಹಣ ಹಾಕುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದರು. ಇದಾದ ಬಳಿಕ ಮೂರು ಬಾರಿ ಚೆಕ್ ಹಾಕಿದರೂ ಖಾತೆಯಲ್ಲಿ ಹಣವಿಲ್ಲದೇ ಬೌನ್ಸ್ ಆಗಿದೆ. ಈ ವೇಳೆ ಸಂಘಟಕರನ್ನ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ನೀಡಿದ್ದ ವಿಳಾಸಕ್ಕೆ ನೋಟಿಸ್ ಕಳುಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾರೇ ಡ್ಯಾನ್ಸ್ ಗ್ರೂಪ್‌ನ ವಿದ್ಯಾರ್ಥಿಗಳು.