ಕಾರವಾರ: ಇಂಡೋ- ಪಾಕ್ ಯುದ್ಧದಲ್ಲಿ ವಿಜಯ ಸಾಧಿಸಿದ ಹಿನ್ನೆಲೆ ಡಿ. 4ನ್ನು ಎಲ್ಲೆಡೆ ಭಾರತೀಯ ನೌಕಾ ದಿನವನ್ನಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ನಿರ್ಣಾಯಕ ಇಂಡೋ ಪಾಕ್ ಯುದ್ಧದಲ್ಲಿ ಮಂಚೂಣಿಯಲ್ಲಿದ್ದ ನೌಕೆಯೊಂದು ನಿವೃತ್ತಿ ಹೊಂದಿ ಆಡಳಿತದ ನಿರ್ಲಕ್ಷ್ಯದಿಂದಾಗಿ ಅವಸಾನದ ಹಂತ ತಲುಪಿದ್ದು, ಈ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಹೌದು, ಪ್ರತಿ ವರ್ಷ ಡಿಸೆಂಬರ್ 4ನ್ನು ಭಾರತೀಯ ನೌಕಾ ದಿನವನ್ನಾಗಿ ಆಚರಿಸಲಾಗುತ್ತದೆ. 1971ರಲ್ಲಿ ಭಾರತ- ಪಾಕಿಸ್ತಾನಗಳ ನಡುವೆ ಯುದ್ಧ ನಡೆದಿತ್ತು. ಭಾರತೀಯ ನೌಕಾಪಡೆ ಈ ವೇಳೆ ಪ್ರಮುಖ ಪಾತ್ರ ವಹಿಸಿ, ಡಿ. 4ರಂದು ವಿಜಯಶಾಲಿಯಾಗುವಲ್ಲಿ ಯಶಸ್ವಿಯಾಗಿತ್ತು. ಯುದ್ಧದ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ಬಾಂಬ್ ದಾಳಿ ಮಾಡಲು ಮತ್ತು ಅರಬ್ಬಿ ಸಮುದ್ರದಲ್ಲಿ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುವಲ್ಲಿ ಐಎನ್‌ಎಸ್ ಚಾಪೆಲ್ ಬಹುಮುಖ್ಯ ಪಾತ್ರ ವಹಿಸಿತ್ತು.
ಇದು ಪಾಕಿಸ್ತಾನದ ವಾಣಿಜ್ಯ ರಾಜಧಾನಿಯನ್ನು ದುರ್ಬಲಗೊಳಿಸಿ, ಭಾರತದ ಅಂತಿಮ ವಿಜಯದಲ್ಲಿ ನೆರವಾಗಿತ್ತು. ಈ ಚಾಪೆಲ್‌ನಲ್ಲಿ ಕಾರ್ಯನಿರ್ವಹಿಸಿದ್ದ ಇಬ್ಬರು ಸಿಬ್ಬಂದಿಗೆ ಪರಮ ವೀರ ಚಕ್ರ ಮತ್ತು 8 ವೀರ ಚಕ್ರಗಳು ಬಂದಿದ್ದವು. ಹೀಗೆ ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 29 ವರ್ಷಗಳ ಸೇವೆಯ ಬಳಿಕ 2005ರ ಮೇ 5ರಂದು ಐಎನ್‌ಎಸ್ ಚಾಪಲ್ ಅನ್ನು ನಿವೃತ್ತಿಗೊಳಿಸಲಾಯಿತು. ನಂತರ ಒಂದು ವರ್ಷದ ಬಳಿಕ ಕಾರವಾರದ ಟ್ಯಾಗೋರ್ ತೀರದಲ್ಲಿ, ಪನ್ವೇಲ್- ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಮ್ಯೂಸಿಯಂ ಆಗಿ ಸ್ಥಾಪಿಸಲಾಯಿತು.
ಉಸಿರುಗಟ್ಟುವ ವಾತಾವರಣ: 'ಪ್ರತಿದಿನ ನೂರಾರು ಪ್ರವಾಸಿಗರು ಈ ಮ್ಯೂಸಿಯಂ ವೀಕ್ಷಣೆಗೆಂದೇ ಕಾರವಾರಕ್ಕೆ ಭೇಟಿ ನೀಡುತ್ತಾರೆ. ಮ್ಯೂಸಿಯಂನ ಪ್ರವೇಶ ದ್ವಾರದಲ್ಲೇ 15 ರೂ. ಪ್ರವೇಶ ಶುಲ್ಕ ಪಾವತಿಸಿ ತೆರಳಬೇಕಿದೆ. ಈ ಮ್ಯೂಸಿಯಂಗೆ ಈಗಾಗಲೇ 16 ವರ್ಷಗಳಾಗಿದ್ದು, ಸದ್ಯ ತುಕ್ಕು ಹಿಡಿದು ಹಾಳಾಗುತ್ತಿದೆ. ಒಳಭಾಗದಲ್ಲಿದ್ದ ಎಸಿ ಕೆಟ್ಟಿದ್ದು, ತ್ರೀಫೇಸ್ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಒಳ ಹೊಕ್ಕರೆ ಉಸಿರುಗಟ್ಟುವ ವಾತಾವರಣ ಇಲ್ಲಿದೆ' ಅಂತಾರೆ ಪ್ರವಾಸಿ ಸೀಮಾ.
ಚಾಪೆಲ್ ಮ್ಯೂಸಿಯಂ ಬಗ್ಗೆ ಪ್ರವಾಸಿಗರು ಮಾತನಾಡಿದ್ದಾರೆ ಲೈಟಿನ ವ್ಯವಸ್ಥೆ ಕೂಡ ಇಲ್ಲ: 'ಇನ್ನು ಇಲ್ಲಿ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರೂ, ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲವಾಗಿದೆ. ಶೌಚಾಲಯವಿದ್ದರೂ ನೀರು ಬಾರದೆ ಪ್ರವಾಸಿಗರು ಪರದಾಡುವಂತಾಗಿದೆ. ರಾತ್ರಿ ಹೊತ್ತಿನಲ್ಲಿ ಇಲ್ಲಿ ಲೈಟಿನ ವ್ಯವಸ್ಥೆ ಕೂಡ ಇಲ್ಲದಾಗಿದೆ. ಅಲ್ಲದೇ ಈ ಮುಂಚೆ ನೌಕೆಯ ಒಳಗೆ ತೋರಿಸುತ್ತಿದ್ದ 15 ನಿಮಿಷಗಳ ಸಾಕ್ಷ್ಯ ಚಿತ್ರವನ್ನು ಕೂಡ ಕರೆಂಟ್ ಇಲ್ಲದೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಗೂಗಲ್‌ನಲ್ಲಿ ನೌಕೆಯ ಹೊರ ಭಾಗದ ಅಂದದ ಫೊಟೋಗಳನ್ನ ನೋಡಿಕೊಂಡು ಇಲ್ಲಿಗೆ ಬಂದವರು ಯಾಕಾದ್ರೂ ಇಲ್ಲಿಗೆ ಬಂದೆವಪ್ಪ ಎನ್ನುವಂಥ ವ್ಯವಸ್ಥೆ ಇಲ್ಲಿದೆ ಎನ್ನುತ್ತಾರೆ' ಪ್ರವಾಸಿ ಸ್ನೇಹ.
ಪ್ರವಾಸಿಗರಿಂದ ಕಿರಿಕ್:ಇನ್ನು ಈ ಬಗ್ಗೆ ಕ್ಯೂರೇಟರ್ ವಿಜಯ್ ಅವರು ಮಾತನಾಡಿದ್ದು, 'ಕ್ಷಿಪಣಿ ಉಡಾವಣೆ ವ್ಯವಸ್ಥೆ ಹೊಂದಿರುವ ಚಾಪೆಲ್ ನೌಕೆ, 1976ರ ನವೆಂಬರ್ 4ರಂದು ಭಾರತೀಯ ನೌಕಾಪಡೆಯ ಸೇವೆಗೆ ಸೇರ್ಪಡೆಗೊಂಡಿತ್ತು. 245 ಟನ್ ತೂಕ, 38.6 ಮೀಟರ್ ಉದ್ದ ಹಾಗೂ 7.6 ಮೀ. ಅಗಲ ಇರುವ ನೌಕೆ, ಗರಿಷ್ಠ ಗಂಟೆಗೆ 37 ನಾಟಿಕಲ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿತ್ತು. ಎರಡು 30 ಎಂಎ ಗನ್‌ಗಳು, ಒಂದು ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ಉಡಾವಣೆ, ನಾಲ್ಕು ಹಡಗು ವಿರೋಧಿ ಕ್ಷಿಪಣಿ ಲಾಂಚರ್‌ಗಳು ಇದರಲ್ಲಿವೆ. ಇವುಗಳೆಲ್ಲವನ್ನು ಪ್ರವಾಸಿಗರಿಗೆ ವಿವರಿಸಲು ಇರುವ ಕ್ಯೂರೇಟರ್‌ಗಳೊಂದಿಗೆ ಪ್ರತಿನಿತ್ಯ ಪ್ರವಾಸಿಗರು ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿರುವ ಕ್ಯೂರೇಟರ್‌ಗಳು ಕೂಡ ಅಸಹಾಯಕರಂತಾಗಿದ್ದು, ಪ್ರವಾಸಿಗರು ಬೈದರೂ ಕೂಡ ಬೈಸಿಕೊಳ್ಳುವಂತಾಗಿದೆ ಎಂದಿದ್ದಾರೆ'.
ಒಟ್ಟಿನಲ್ಲಿ ನೂರಾರು ಪ್ರವಾಸಿಗರನ್ನ ಸೆಳೆಯುವ ಪ್ರವಾಸಿ ಸ್ಥಳ, ಅದರಲ್ಲೂ ಯುದ್ಧದ ಕ್ಷಣವನ್ನ ಕಟ್ಟಿಕೊಡುತ್ತಿದ್ದ ಜೀವಂತ ನೌಕೆಯೊಂದನ್ನ ಹೀಗೆ ತುಕ್ಕು ಹಿಡಿದು, ವ್ಯವಸ್ಥೆಗಳಿಲ್ಲದೆ ಜಿಲ್ಲಾಡಳಿತ ಹಾಳುಗೆಡುವುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯೇ ಸರಿ. ತಕ್ಷಣವೇ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಿ, ನೌಕೆಯನ್ನ ದುರಸ್ತಿಪಡಿಸಿ ಪ್ರವಾಸಿಗರನ್ನ ಸೆಳೆಯುವಂತೆ ಮಾಡಬೇಕಿದೆ.
ಓದಿ:ಮ್ಯೂಸಿಯಂ ಆಗಲಿದೆ ಪ್ರಧಾನಿ ಮೋದಿ ಚಹಾ ಮಾರಿದ್ದ ಅಂಗಡಿ