ಕಾರವಾರ/ಉತ್ತರಕನ್ನಡ:ಜುಲೈ ಅಂತ್ಯದ ವೇಳೆಗೆ ಸುರಿದ ಭಾರಿ ಮಳೆಯಿಂದಾಗಿ ಕಾರವಾರದ ಕೊಡಸಳ್ಳಿ ಜಲಾಶಯದ ಬಳಿ ಗುಡ್ಡ ಕುಸಿತವಾಗಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದ ಪ್ರದೇಶಗಳಿಗೆ ಮಂಗಳವಾರ ಕೇಂದ್ರ ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆಯ ತಂಡ ತೆರಳಿ ಪರಿಶೀಲನೆ ನಡೆಸಿದೆ.
ಜು.23 ರ ರಾತ್ರಿ ಸುಮಾರು 2 ಗಂಟೆಗೆ ಜಲಾಶಯದಿಂದ 200 ಮೀಟರ್ ದೂರದಲ್ಲಿ ಗುಡ್ಡಕುಸಿತವಾಗಿದ್ದು, ಸುಮಾರು 200 ಮೀಟರ್ ಎತ್ತರದಿಂದ ಕಲ್ಲು ಬಂಡೆ, ಮರಗಿಡಗಳ ಸಹಿತ ಭಾರಿ ಪ್ರಮಾಣದಲ್ಲಿ ಗುಡ್ಡ ಜಾರಿ ಬಂದಿದೆ. ಪರಿಣಾಮ ಒಂದು ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಇನ್ನೊಂದು ರಸ್ತೆಯಲ್ಲೂ ಕೂಡ ದೊಡ್ಡ ಪ್ರಮಾಣದಲ್ಲಿ ಮಣ್ಣು ಹಾಗೂ ಮರಗಿಡಗಳು ಬಿದ್ದಿದ್ದರಿಂದ ಅಂದು ವಿದ್ಯುದಾಗಾರದಲ್ಲಿ ಕೆಲಸ ಮಾಡುತ್ತಿದ್ದವರು ಸಂಚಾರ ಸಾಧ್ಯವಾಗದೇ ಸಮಸ್ಯೆಗೆ ಸಿಲುಕಿಕೊಳ್ಳುವಂತಾಗಿತ್ತು.
ಅಲ್ಲದೇ ಕೊಡಸಳ್ಳಿ ಸಮೀಪದ ಕಳಚೆಯಲ್ಲಿಯೂ ಕೂಡ ಭಾರಿ ಪ್ರಮಾಣದಲ್ಲಿ ಭೂ ಕುಸಿತವಾಗಿ ಊರಿನ ಹತ್ತಾರು ಮನೆಗಳು ಹಾನಿಗೊಳಗಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇದಲ್ಲದೇ ಜಲಾಶಯದ ಸಮೀಪದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿಯೂ ಭೂ ಕುಸಿತವಾಗಿರುವುದು ಕಂಡು ಬರುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು.
ಕೇಂದ್ರ ತಂಡ ಭೇಟಿ, ಪರಿಶೀಲನೆ
ಈ ಹಿನ್ನೆಲೆ ಕೇಂದ್ರ ತಂಡದ ಭೂ ವಿಜ್ಞಾನಿ ಕಮಲಕುಮಾರ್ ನೇತೃತ್ವದ ತಂಡ ಸ್ಥಳೀಯ ಅಧಿಕಾರಿಗಳ ಸಹಕಾರದಲ್ಲಿ ಕೊಡಸಳ್ಳಿ ಜಲಾಶಯದ ಸಮೀಪದ ಗುಡ್ಡಕುಸಿತ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಭೂ ಕುಸಿತವಾದ ಪ್ರದೇಶಗಳಲ್ಲಿ ಕಲ್ಲು ಮಣ್ಣಿನ ಪರೀಶೀಲನೆ ನಡೆಸಿದ ತಂಡ, ಸ್ಥಳೀಯ ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಸ್ಥಳದಲ್ಲಿಯೇ ಕಲ್ಲು ಮಣ್ಣಿನ ಪರೀಕ್ಷೆ ನಡೆಸಿದ ತಂಡ ಭೂ ಕುಸಿತವಾದ ಪ್ರದೇಶಗಳ ನಕ್ಷೆ ತೆಗೆದು ಮತ್ತೆ ಕುಸಿಯುವ ಸಾಧ್ಯತೆ ಬಗೆಗೆ ಅಧ್ಯಯನ ನಡೆಸಿದೆ.