ಕರ್ನಾಟಕ

karnataka

ETV Bharat / state

ಕೋಟಿ ಕೋಟಿ ಸುರಿದರೂ ನನೆಗುದಿಗೆ ಬಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ.. - Karwar News 2021

ಮೂರು ವರ್ಷದಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಕೆರವಡಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನಾ ವ್ಯಾಪ್ತಿಯ ಹಲವು ಗ್ರಾಮಗಳಿಗೇ ಇನ್ನೂ ಕುಡಿಯುವ ನೀರು ಪೂರೈಕೆಯಾಗಿಲ್ಲ..

Karwar
ಯೋಜನೆ ಪರಿಶೀಲಿಸುತ್ತಿರುವ ಸಚಿವರು

By

Published : Feb 1, 2021, 5:20 PM IST

ಕಾರವಾರ :ಅದು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ. ದಶಕಗಳಿಂದ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಪ್ರಯತ್ನಿಸುತ್ತಿದ್ದರೂ ಸಹ ಒಂದಿಲ್ಲೊಂದು ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಮರುಜೀವ ಕೊಡಲು ಗ್ರಾಮೀಣಾಭಿವೃದ್ಧಿ ಸಚಿವರು ಮುಂದಾಗಿದ್ದಾರೆ.

2013ರಲ್ಲಿ ಕಾರವಾರ ತಾಲೂಕಿನ ಕೆರವಡಿ ಗ್ರಾಮದಲ್ಲಿ ಒಟ್ಟು 14 ಗ್ರಾಮಗಳಿಗೆ ಇಲ್ಲಿನ ಕಾಳಿ ನದಿಯಿಂದ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲು ₹7.30 ಕೋಟಿ ವೆಚ್ಛದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಿದ್ಧಪಡಿಸಲಾಗಿತ್ತು. ಬರೋಬ್ಬರಿ ಐದು ವರ್ಷಗಳವರೆಗೆ ಕುಂಟುತ್ತಾ ಸಾಗಿದ ಯೋಜನೆಯ ಕಾಮಗಾರಿ 2018ರಲ್ಲಿ ಬಹುತೇಕ ಪೂರ್ಣಗೊಂಡಿತ್ತು.

ಈ ವೇಳೆ ತಾಲೂಕಿನ ಏಳೆಂಟು ಗ್ರಾಮಗಳಿಗೆ ನೀರನ್ನು ಸಹ ಪೂರೈಕೆ ಮಾಡಿದ್ದು, ಉಳಿದ ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, 2019ರಲ್ಲಿ ಉಂಟಾದ ನೆರೆಯಿಂದಾಗಿ ನೀರು ಪೂರೈಕೆಗೆ ಹಾಕಲಾಗಿದ್ದ ಪೈಪ್‌ಲೈನ್, ಟ್ಯಾಂಕ್‌ಗಳಿಗೆ ಹಾನಿಯುಂಟಾಗಿದ್ದು, ಯೋಜನೆ ಸ್ಥಗಿತಗೊಂಡಿದೆ.

ಈ ಹಿನ್ನೆಲೆ ಯೋಜನೆ ರೂಪಿಸಲಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಕೇಂದ್ರದ ಜಲ ಜೀವನ ಮಿಷನ್ ಯೋಜನೆಯಡಿ ಈ ಯೋಜನೆಗೆ ಪುನಶ್ಚೇತನ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳೋದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ "ಮನೆ ಮನೆಗೆ ಗಂಗೆ" ಎನ್ನುವ ಯೋಜನೆಯಡಿ ಎಲ್ಲಾ ಗ್ರಾಮಗಳ ಮನೆಗಳಿಗೂ ನಳದ ಮೂಲಕ ನೀರನ್ನು ಪೂರೈಸುವ ಗುರಿ ಇರಿಸಿಕೊಳ್ಳಲಾಗಿದೆ.

ಸದ್ಯ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಲಾ ಓರ್ವನಿಗೆ 40 ಲೀಟರ್ ಕುಡಿಯುವ ನೀರು ಪೂರೈಕೆ ಮಾಡುವುದಾಗಿದ್ದು ಇದನ್ನು 55ಕ್ಕೆ ಏರಿಸಲು ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಜಲ ಜೀವನ ಮಿಷನ್ ಅಡಿಯಲ್ಲಿ ₹163 ಕೋಟಿ ವೆಚ್ಛದಲ್ಲಿ ಜಿಲ್ಲೆಯಲ್ಲಿ ಎಲ್ಲ ಮನೆಗಳಿಗೂ ಕುಡಿಯುವ ನೀರಿನ ಪೂರೈಕೆಗೆ ಯೋಜನೆ ರೂಪಿಸಲಾಗುತ್ತಿದೆ.

ಮೂರು ವರ್ಷದಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಕೆರವಡಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನಾ ವ್ಯಾಪ್ತಿಯ ಹಲವು ಗ್ರಾಮಗಳಿಗೇ ಇನ್ನೂ ಕುಡಿಯುವ ನೀರು ಪೂರೈಕೆಯಾಗಿಲ್ಲ.

ಹೀಗಾಗಿ, ಮೊದಲು ಯೋಜನೆಯ ಕಾಮಗಾರಿಯನ್ನು ಸಮರ್ಪಕವಾಗಿ ಪೂರ್ಣಗೊಳಿಸಿ ಬಳಿಕ ಯೋಜನೆಯನ್ನು ಅಭಿವೃದ್ಧಿಪಡಿಸುವ ಕುರಿತು ಯೋಚಿಸಬೇಕು ಎಂದು ಸ್ಥಳೀಯ ಜನಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನೆಗುದಿಗೆ ಬಿದ್ದಿರುವ ಯೋಜನೆ ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳು ಮುಂದಾಗಿರುವುದು ಉತ್ತಮ ಬೆಳವಣಿಗೆ. ಇನ್ನಾದ್ರೂ ಈ ಭಾಗದ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಾ ಅನ್ನೋದನ್ನು ಕಾದು ನೋಡಬೇಕು.

ABOUT THE AUTHOR

...view details