ಕಾರವಾರ: ರಂಗು ರಂಗಿನ ಹೋಳಿ ಹಬ್ಬವನ್ನು ಜಿಲ್ಲಾದ್ಯಂತ ಮಂಗಳವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಯುವಕರು ವಿವಿಧ ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿದ್ದರು. ದಾರಿ ಹೋಕರು ಹಾಗೂ ಬೈಕ್‌ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎನ್ನುತ್ತಾ ಸಂಭ್ರಮಿಸಿದರು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದರು.
ಎರಡು ವರ್ಷಕ್ಕೊಮ್ಮೆ ಮಾತ್ರ ಹೋಳಿ ಆಡುವ ಶಿರಸಿಯಾದ್ಯಂತ ಅದ್ದೂರಿಯಾಗಿ ಹೋಳಿ ಆಡಲಾಯಿತು. ನಗರದಾದ್ಯಂತ ಸಂಪೂರ್ಣ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಇಲ್ಲಿಯೂ ಬೆಳಗ್ಗೆಯಿಂದಲೇ ಹೋಳಿ ಸಂಭ್ರದಲ್ಲಿ ತೊಡಗಿದ ಜನರು ನಗರದ ದೇವಿಕೆರೆ ಬಳಿ ಬೃಹತ್ ಸಂಖ್ಯೆಯಲ್ಲಿ ಹೋಳಿ ಬಣ್ಣದಲ್ಲಿ ಮಿಂದೆದ್ದು ಕಂಡು ಬಂತು. ಕಾರವಾರ ನಗರದ ಕೋಣೆವಾಡ, ಕಳಸವಾಡ ಮತ್ತಿತರ ಕಡೆಗಳಲ್ಲಿ ಗುಜರಾತಿ ಹಾಗೂ ರಾಜಸ್ಥಾನಿಗಳು ಹೋಳಿಯನ್ನು ವಿಶೇಷವಾಗಿ ಆಚರಿಸಿದರು. ಎಲ್ಲರೂ ಒಂದೆಡೆ ಸೇರಿ ವಿಶೇಷ ಪಾಯಸ ಸವಿದು ಮೈಮರೆತು ಕುಣಿದು ಕುಪ್ಪಳಿಸಿದರು. ಪುರುಷರು ಸಿನಿಮಾ ಹಾಡುಗಳಿಗೆ ನೃತ್ಯ ಮಾಡುತ್ತಿದ್ದರೆ, ಮಹಿಳೆಯರು ಹೋಳಿಯ ಸಾಂಪ್ರದಾಯಿಕ ಹಾಡಿಗೆ ಹೆಜ್ಜೆ ಹಾಕಿದರು.
ಸುಗ್ಗಿ ಮೇಳ ಸಡಗರಕ್ಕೆ ವಿದಾಯ :ಇನ್ನು ಒಂದು ವಾರದಿಂದ ಸುಗ್ಗಿ ಮೇಳ ಕಟ್ಟಿ ತಿರುಗಾಟ ನಡೆಸಿದವರು ಹೋಳಿ ಹಬ್ಬದ ದಿನ ವರ್ಷದಿಂದ ಸುಗ್ಗಿಯ ಸಡಗರಕ್ಕೆ ವಿದಾಯ ಹೇಳಿದರು. ಕಾರವಾರದ ಹಬ್ಬುವಾಡ, ಅಂಬೇಡ್ಕರ್ ವೃತ್ತ, ಗೀತಾಂಜಲಿ ಚಿತ್ರಮಂದಿರದ ಬಳಿ ಬಣ್ಣ ಹಚ್ಚಲೆಂದೇ ಯುವಕರ ತಂಡ ನೆರೆದಿತ್ತು. ಕುಂಠಿ ಮಹಾಮಾಯಿ ದೇವಸ್ಥಾನ, ಕಾಜುಬಾಗ ಮತ್ತಿತರ ಕಡೆಗಳಲ್ಲಿ ಯುವಕ, ಯುವತಿಯರು ಸಿನಿಮಾ ಹಾಡುಗಳಿಗೆ ಹಜ್ಜೆ ಹಾಕುತ್ತ ಓಕುಳಿ ಆಡಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಓಕುಳಿಯಾಡಿದ ಜನರು ಜಿಲ್ಲೆಯ ವಿವಿಧ ಕಡಲತೀರಗಳಿಗೆ ತೆರಳಿ ಸಮುದ್ರ ಸ್ನಾನ ಮಾಡಿದರು. ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಸಾವಿರಾರು ಜನ ಮಿಂದೆದ್ದು ಖಷಿಪಟ್ಟರು.
ಪೊಲೀಸ್ ಬಿಗಿ ಭದ್ರತೆ :ಕಡಲತೀರದಲ್ಲಿ ಯಾವುದೇ ಅವಘಡ ಆಗದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕರಾವಳಿ ಕಾವಲು ಪಡೆ, ಪೊಲೀಸರು ಹಾಗೂ ಜೀವ ರಕ್ಷಕ ಸಿಬ್ಬಂದಿ ಕಣ್ಗಾವಲು ಇರಿಸಿದ್ದರು. ಹೋಳಿ ಹಬ್ಬದ ನಿಮಿತ್ತ ಬೆಳಗ್ಗೆಯಿಂದಲೇ ಕಾರವಾರದ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಅಘೋಷಿತ ಬಂದ್ ಮಾಡಲಾಗಿತು. ಇದರಿಂದಾಗಿ ವ್ಯಾಪಾರ ವಹಿವಾಟಿನಲ್ಲಿ ಸ್ವಲ್ಪಮಟ್ಟಿನ ಅಸ್ತವ್ಯಸ್ತತೆ ಉಂಟಾಯಿತು. ಪ್ರಮುಖ ಬೀದಿಗಳಲ್ಲಿ ಓಕುಳಿಯಾಟದಲ್ಲಿ ತೊಡಗಿದ್ದ ಹುಡುಗರ ಗುಂಪು ಬಿಟ್ಟರೆ ಜನಸಂಚಾರವೂ ವಿರಳವಾಗಿತ್ತು. ಸಂಜೆಯ ನಂತರ ಕೆಲವು ಹೋಟೆಲ್, ಮಳಿಗೆಗಳು ತೆರೆದು ವ್ಯಾಪಾರ ನಡೆಸಿದವು.
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವಿಶಿಷ್ಟತೆ:ಇಡೀ ದೇಶದಲ್ಲಿಯೇ ಬಾಗಲಕೋಟೆಯ ಹೋಳಿ ಆಚರಣೆಗೆ ಒಂದು ವಿಶಿಷ್ಟತೆ ಇದೆ. ಬಾಗಲಕೋಟೆಯಲ್ಲಿ ಐದು ದಿನಗಳ ಕಾಲ ಹೋಳಿ ಹಬ್ಬ ಆಚರಿಸಲಾಗುತ್ತದೆ. ನಗರದಲ್ಲಿ ಮುಖ್ಯವಾಗಿ 5 ಪೇಟೆಗಳಿವೆ. ಕಿಲ್ಲಾ, ಹಳಪೇಟೆ, ಹೊಸಪೇಟೆ, ಜೈನಪೇಟೆ ಮತ್ತು ವೆಂಕಟಪೇಟೆ. ಮುಳುಗಡೆಯಿಂದ ಇವೆಲ್ಲ ಮೂಲ ಸ್ವರೂಪದಲ್ಲಿ ಉಳಿದಿಲ್ಲ. ಈ ಐದು ಓಣಿಗಳಿಗೆ ತುರಾಯಿ ಹಲಗೆ ಬಾಗಲಕೋಟೆ ಹೋಳಿ ಹಬ್ಬದ ಅತಿ ಮುಖ್ಯ ಆಕರ್ಷಣೆ ಆಗಿದೆ.