ಕಾರವಾರ:ಲಾರಿಯಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 17 ಕೋಣಗಳನ್ನು ರಕ್ಷಣೆ ಮಾಡಿರುವ ಪೊಲೀಸರು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಅಂಕೋಲಾ ತಾಲೂಕಿನ ಕೋಡ್ಸಣಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ಈ ನಡೆದಿದೆ.
ಹಿಂಸಾತ್ಮಕವಾಗಿ ಕೋಣಗಳ ಅಕ್ರಮ ಸಾಗಾಟ.. ಬೆಳ್ತಂಗಡಿ ಮೂಲದ ಹೈದರ್ ಬ್ಯಾರಿ, ಅಂಕೋಲಾದ ಬೊಮ್ಮಯ್ಯ ನಾಯಕ, ಹಾಸನದ ಮಂಜೇಗೌಡ ಹಾಗು ಕೇರಳದ ಕಾಸರಗೋಡು ಮೂಲದ ಅಬ್ದುಲ್ ರಿಯಾಸ್ ಬಂಧಿತ ಆರೋಪಿಗಳು. ಕೇರಳ ಮೂಲದ ಇನ್ನೋರ್ವ ಆರೋಪಿ ಅಬುಬಕ್ಕರ್ ದಿಲ್‌ಶಾದ್ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಅಂಕೋಲಾದಿಂದ ಮಂಗಳೂರು ಕಡೆ ತೆರಳುತ್ತಿದ್ದ ಲಾರಿಯನ್ನು ತಡೆದ ಗಸ್ತು ಪೊಲೀಸರು ತಪಾಸಣೆ ನಡೆಸಿದಾಗ ಯಾವುದೇ ದಾಖಲೆಗಳಿಲ್ಲದೆ 17 ಕೋಣಗಳನ್ನು ಉಸಿರಾಡಲು ಸಾಧ್ಯವಾಗದ ರೀತಿ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಜಾನುವಾರು ಸಾಗಣೆಗೆ ಬಳಸಿದ್ದ ಲಾರಿ, ಕಾರು ಸೇರಿ 9 ಲಕ್ಷ ಮೌಲ್ಯದ ಸ್ವತ್ತು ಹಾಗು 2.25 ಲಕ್ಷ ರೂ. ಮೌಲ್ಯದ 17 ಕೋಣಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.