ಭಟ್ಕಳ (ಉತ್ತರ ಕನ್ನಡ): ತಾಲೂಕಿನಲ್ಲಿ ನಡೆಯುತ್ತಿರುವ ಗೋ ಕಳ್ಳತನ ಮತ್ತು ಅನಧಿಕೃತ ಕಸಾಯಿ ಖಾನೆ ಬಂದ್ ಮಾಡಿಸುವ ಕುರಿತು ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್-19 ಪ್ರಾರಂಭವಾದಾಗಿನಿಂದ ಭಟ್ಕಳದಲ್ಲಿ ಇಲ್ಲಿಯವರೆಗೆ ನೂರಾರು ಗೋವುಗಳು ಕಳ್ಳತನವಾಗಿವೆ ಮತ್ತು ಗೋವುಗಳ ಹತ್ಯೆ ರಾಜಾರೋಷವಾಗಿ ನಡೆಯುತ್ತಿದೆ. ಹಿಂದೂಗಳು ಪೂಜಿಸುವ ಗೋವುಗಳ ವಧೆ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೃತ್ಯವಾಗಿದ್ದು ಇದು ಖಂಡನಾರ್ಹವಾದದ್ದುಎಂದು ಹೈಕೋರ್ಟ್ ನ್ಯಾಯವಾದಿ ಹಾಗೂ ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ಸಹ ಸಂಚಾಲಕ ದತ್ತಾತ್ರೇಯ ನಾಯ್ಕ ಹೇಳಿದರು.
ಬಿಜೆಪಿ ಕಾನೂನು ಪ್ರಕೋಷ್ಠ ಆಗ್ರಹ ಗೋಕಳ್ಳರು ರೈತರು ಕೊಟ್ಟಿಗೆಯಲ್ಲಿ ಕಟ್ಟಿದ್ದ ಗೋವುಗಳನ್ನು ಕಳ್ಳತನ ಮಾಡುತ್ತಿದ್ದು, ರೈತರು ದೂರು ಕೊಡಲು ಹೋದಾಗ ಕಳುವಾದ ಬಗ್ಗೆ ಸಾಕ್ಷಿ ಕೇಳುತ್ತಿದ್ದಾರೆ. ಭಟ್ಕಳದಲ್ಲಿ ಅನಧಿಕೃತವಾಗಿ ಗೋಮಾಂಸ ಬೀದಿಯಲ್ಲಿ ಮಾರುತ್ತಿದ್ದಾರೆ. ಅನಧಿಕೃತವಾದ ಕಸಾಯಿಖಾನೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಅವುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ರೈತರು ಉಳುಮೆ ಮಾಡಲು ಎತ್ತುಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದು, ಇವರಿಗೆ ಪರಿಹಾರ ನೀಡಬೇಕು. ಗೋ ಕಳ್ಳರಿಂದ ದಂಡ ವಸೂಲಿ ಮಾಡಿ ನೊಂದವರಿಗೆ ಪರಿಹಾರ ನೀಡಬೇಕು. ಈ ಎಲ್ಲ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಬೇಕು. ಈ ಮಸ್ಯೆಗಳಿಗೆ ಗೋಹತ್ಯೆ ನಿಷೇಧ ಕಾಯ್ದೆ ಒಂದೇ ಪರಿಹಾರವಾಗಿದ್ದು ಈ ತಕ್ಷಣವೇ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಬೇಕು. ಜಿಲ್ಲಾಡಳಿತವು ಗೋಕಳ್ಳರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈರಾ ನಾಯ್ಕ, ಶ್ರೀಧರ ನಾಯ್ಕ, ಮಂಗಳ ಗೊಂಡ, ರಮೇಶ ನಾಯ್ಕ, ಮಾಸ್ತಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.