ಭಟ್ಕಳ (ಉತ್ತರ ಕನ್ನಡ): ಜನತಾ ಕರ್ಫ್ಯೂ ಇರುವ ವೇಳೆ ಎಂದಿನಂತೆ ರಸ್ತೆಗಿಳಿದ ಜನರಿಗೆ ನಗರ ಠಾಣೆಯ ಇಬ್ಬರು ಪಿಎಸ್ಐಗಳು ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್ ಸವಾರರ 20 ಬೈಕ್ ವಶಕ್ಕೆ ಪಡೆದು ಕೋವಿಡ್ ವಿಪತ್ತು ನಿರ್ವಹಣೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ತಲಾ 1 ಸಾವಿರ ರೂ. ದಂಡ ವಿಧಿಸಿದರು.
ಅನಗತ್ಯವಾಗಿ ಓಡಾಡುತ್ತಿದ್ದವರ ಮೇಲೆ ಪೊಲೀಸರು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದ್ದು, ಜನರ ಓಡಾಟದ ಮೇಲೆ ನಿಗಾ ಇಟ್ಟು, ಅಗತ್ಯ ವಸ್ತುಗಳ ಖರೀದಿ ಅವಧಿ ಮುಗಿದರೂ ಸುಖಾಸುಮ್ಮನೆ ಬೈಕ್ನಲ್ಲಿ ತಿರುಗಾಡುತ್ತಿದ್ದ ಸವಾರರಿಗೆ ಚಳಿ ಬಿಡಿಸಿದ್ದಾರೆ.
ಬೈಕ್ ಸವಾರರಿಗೆ ಶಾಕ್ ನೀಡಿದ ಪೊಲೀಸರು ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿ ಅವಧಿಯಲ್ಲಿಯೇ 6 ಗಂಟೆಯಿಂದ 10 ಗಂಟೆಯವರೆಗೆ ಪೊಲೀಸರು ಜನ ಸೇರದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದು, 10 ಗಂಟೆ ನಂತರ ನೇರವಾಗಿ ಹಳೇ ಬಸ್ ನಿಲ್ದಾಣದಲ್ಲಿ ನಗರ ಠಾಣೆ ಪಿಎಸ್ಐ ಕುಡಗುಂಟಿ ಹಾಗೂ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿ ರಸ್ತೆಯಲ್ಲಿ ಓಡಾಡುವ ಪ್ರತಿಯೊಂದು ಬೈಕ್ ಹಾಗೂ ಕಾರ್ಗಳ ಪರಿಶೀಲನೆಗಿಳಿದರು. ಇದರ ಪರಿಣಾಮವಾಗಿ ಬೇಕಾಬಿಟ್ಟಿ ಓಡಾಡುವ ಜನರಿಗೆ ಕಡಿವಾಣ ಹಾಕಿದಂತಾಯಿತು.
ಸುಮಾರು 2 ಗಂಟೆ ಅವಧಿಯವರೆಗೆ ಸಾಕಷ್ಟು ವಾಹನಗಳನ್ನು ಪರಿಶೀಲನೆ ಮಾಡಿದ ಪೊಲೀಸರು, 15 ಬೈಕ್ ವಶಕ್ಕೆ ಪಡೆದು ಠಾಣೆಗೆ ಸಾಗಿಸಿದರು. ಈ ಮಧ್ಯೆ ಕೆಲ ಬೈಕ್ ಸವಾರರು ಪೊಲೀಸರಿಗೆ ಕಾನೂನಿನ ಪಾಠ ಮಾಡಲು ಬಂದ ಹಿನ್ನೆಲೆ, ಮಾಡಿದ ತಪ್ಪುನ್ನು ಸಮರ್ಥಿಸಿಕೊಳ್ಳಲು ಬರಬೇಡಿ ಎಂದು ಎಚ್ಚರಿಕೆ ನೀಡಿದರು.
ಪಿಎಸ್ಐ ಕುಡಗುಂಟಿ ನೇತ್ರತ್ವದಲ್ಲಿ 15 ವಾಹನಗಳ ಸವಾರರಿಂದ ತಲಾ 1 ಸಾವಿರದಂತೆ 15 ಸಾವಿರ ರೂ. ದಂಡ ವಸೂಲಿ ಮಾಡಿ ಎಲ್ಲರ ಮೇಲೆ ಕೋವಿಡ್ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ವಾಹನ ಬಿಡಲಾಯಿತು.
ನಂತರ ಸಂಶುದ್ದೀನ್ ಸರ್ಕಲ್ನಲ್ಲಿ ಪಿಎಸ್ಐ ಸುಮಾ ಬಿ. ನೇತ್ರತ್ವದ ತಂಡವೂ ವಾಹನ ತಪಾಸಣೆಗಿಳಿದಿದ್ದು, ಅವರು 5 ದ್ವಿಚಕ್ರ ವಾಹನ ವಶಕ್ಕೆ ಪಡೆದು ತಲಾ 1 ಸಾವಿರದಂತೆ ದಂಡ ಹಾಕಿ ಅವರ ಮೇಲೆ ಕೋವಿಡ್ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಾಹನ ಬಿಡಲಾಯಿತು.
ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಆದೇಶದಂತೆ ನಗರ ಠಾಣೆ ಇಬ್ಬರು ಪಿಎಸ್ಐಗಳು-ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಿಂದಾಗಿ ರಸ್ತೆಯಲ್ಲಿ ಇಷ್ಟು ದಿನ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದಂತಾಗಿದ್ದು ,ಇದರ ಪರಿಣಾಮವಾಗಿ ದಿನವಿಡೀ ಜನರ ಓಡಾಟ ಬಂದ್ ಆಗಿ ರಸ್ತೆ ಬಿಕೋ ಎನ್ನುವಂತಾಯಿತು.