ಶಿರಸಿ:ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಉಪಚುನಾವಣೆ ಘೋಷಿಸಿದೆ. ಇದರಿಂದ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯಲಿದ್ದು, ಜಿಲ್ಲೆಯನ್ನು ಆಳಿದ್ದ ಕಾಂಗ್ರೆಸ್ ಈಗ ಅಭ್ಯರ್ಥಿ ಹುಡುಕಾಟದಲ್ಲಿ ಮುಳುಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಮಾಜಿ ಶಾಸಕ ಶಿವರಾಮ ಹೆಬ್ಬಾರ್ ಅವರ ರಾಜೀನಾಮೆಯಿಂದ ಶಾಸಕ ಸ್ಥಾನ ತೆರವಾದ ಪರಿಣಾಮ ಚುನಾವಣೆ ಘೋಷಣೆಯಾಗಿದೆ. ಹೆಬ್ಬಾರ್ ಕಾಂಗ್ರೆಸ್ನಿಂದ ಆಯ್ಕೆಯಾಗಿ ರಾಜೀನಾಮೆ ನೀಡಿದ ಕಾರಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಭ್ಯರ್ಥಿಯ ಕೊರತೆ ಎದುರಾಗಿದ್ದು, ಹೆಬ್ಬಾರ್ ಜೊತೆಯಲ್ಲಿ ಪರ್ಯಾಯ ನಾಯಕರಾರು ಬೆಳೆಯದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಕಳೆದ ಎರಡು ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಕಾಂಗ್ರೆಸ್, ಈಗ ಅಕ್ಷರಶಃ ಬೇರೆ ಕ್ಷೇತ್ರದ ಅಭ್ಯರ್ಥಿಯನ್ನು ತಂದು ನಿಲ್ಲಿಸುವ ಲೆಕ್ಕಾಚಾರದಲ್ಲಿದೆ. ಹೆಬ್ಬಾರ್ಗೆ ಪುನಾ ಸ್ಪರ್ಧಿಸುವ ಅವಕಾಶ ಸಿಕ್ಕಲ್ಲಿ ಅವರು ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಕಾರಣ ಉತ್ತಮ ಅಭ್ಯರ್ಥಿಯ ಅಗತ್ಯವಿದ್ದು, ಜಿಲ್ಲೆಯ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಅವರ ಪುತ್ರ ಪ್ರಶಾಂತ ದೇಶಪಾಂಡೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅವರ ಹೆಸರು ಮುಂಚೂಣಿಯಲ್ಲಿದೆ.
2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್ ರಚನೆ ಆಗುವ ಮೊದಲು ಮುಂಡಗೋಡ ಮತ್ತು ಹಳಿಯಾಳ ತಾಲೂಕುಗಳನ್ನು ಆರ್ ವಿ ದೇಶಪಾಂಡೆ ಪ್ರತಿನಿಧಿಸುತ್ತಿದ್ದರು. ಈಗ ಮುಂಡಗೋಡ ತಾಲೂಕು ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಉಳಿದುಕೊಂಡಿದ್ದು, ಅವರ ಪ್ರಭಾವ ಸಾಕಷ್ಟಿದೆ. ಅಲ್ಲದೇ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರೂ ಆದ ಕಾರಣ ಎಲ್ಲರ ಸಹಕಾರವಿದೆ. ಇದರಿಂದ ಅವರ ಮಗ ಪ್ರಶಾಂತ ದೇಶಪಾಂಡೆ ಅವರನ್ನು ಅಭ್ಯರ್ಥಿಯನ್ನಾಗಿಸುವ ಲೆಕ್ಕಾಚಾರ ನಡೆಯುತ್ತಿದೆ. ಅದರ ಜೊತೆಗೆ ಭೀಮಣ್ಣ ನಾಯ್ಕ ಹೆಸರೂ ಕೇಳಿ ಬಂದಿದ್ದು, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಭಾಗವಾದ ಬನವಾಸಿ ಭಾಗದಲ್ಲಿ ಇವರು ಹೆಚ್ಚಿನ ಹಿಡಿತವನ್ನು ಹೊಂದಿದ್ದಾರೆ. ಅಲ್ಲದೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಕಾರಣ ಅವರನ್ನು ಅಭ್ಯರ್ಥಿ ಮಾಡಲು ಹಲವಾರು ಮುಖಂಡರು ಆಸಕ್ತಿ ತೋರಿದ್ದಾರೆ.
ಇನ್ನು, ಬಿಜೆಪಿಯ ಅಭ್ಯರ್ಥಿ ಯಾರು ಎಂದು ಸುಪ್ರೀಂ ತೀರ್ಪಿನ ಬಳಿಕ ನಿರ್ಧಾರವಾಗಲಿದ್ದು, ಸುಪ್ರೀಂ ತೀರ್ಪು ಪರವಾಗಿ ಬಂದಲ್ಲಿ ಹೆಬ್ಬಾರ್ ಬಿಜೆಪಿಯ ಅಭ್ಯರ್ಥಿ ಆಗಲಿದ್ದಾರೆ ಎನ್ನಲಾಗಿದೆ. ತೀರ್ಪು ವಿರುದ್ಧವಾಗಿ ಬಂದಲ್ಲಿ ಈ ಹಿಂದೆ ಕಡಿಮೆ ಅಂತರದಲ್ಲಿ ಸೋತ ವಿ ಎಸ್ ಪಾಟೀಲ್ ಅಭ್ಯರ್ಥಿ ಆಗಲಿದ್ದಾರೆ ಎನ್ನಲಾಗಿದೆ.