ಭಟ್ಕಳ: ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಿಗೆ (ಟ್ರೇಡಿಂಗ್ ಲೈಸೆನ್ಸ್) ಪತ್ರವನ್ನು ಪಡೆಯಲು 3 ವಾರಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಭಟ್ಕಳ ಸಹಾಯಕ ಆಯುಕ್ತ ಭರತ್ ತಿಳಿಸಿದ್ದಾರೆ.
ಕಳೆದ 2 ದಿನಗಳ ಹಿಂದೆ ವ್ಯಾಪಾರ ಪರವಾನಿಗೆ ಪತ್ರವನ್ನು ಹೊಂದದವರು ಅಂಗಡಿ ಮುಚ್ಚುವಂತೆ ಸಹಾಯಕ ಆಯುಕ್ತರು ನೀಡಿರುವ ಸೂಚನೆಯ ಬಗ್ಗೆ ಭಟ್ಕಳ ಮರ್ಚಂಟ್ ಅಸೋಸಿಯೇಶನ್ ಸದಸ್ಯರು ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಸಹಾಯಕ ಆಯುಕ್ತ ಭರತ್, ಪುರಸಭಾ ವ್ಯಾಪ್ತಿಯಲ್ಲಿ ಹಲವು ಅಂಗಡಿಕಾರರು ಪರವಾನಿಗೆ ಪತ್ರವನ್ನು ಪಡೆದಿಲ್ಲ. ನೋಟಿಸ್ ನೀಡಿದರೂ ಆಸಕ್ತಿ ವಹಿಸುತ್ತಿಲ್ಲ, ಇದು ನಿಯಮಕ್ಕೆ ವಿರೋಧವಾಗಿದೆ. ಭಟ್ಕಳ ವ್ಯಾಪಾರಿಗಳಿಗೆ ಕೆಲ ವರ್ಷಗಳಿಂದ ವ್ಯಾಪಾರ ಪರವಾನಿಗೆ ಪಡೆಯುವ ಅಭ್ಯಾಸವೆ ಹೊಂದಿಲ್ಲ. ಮೊದಲು ಅಂತವರು 3 ವಾರದೊಳಗಾಗಿ ಪರವಾನಿಗೆ ಪತ್ರ ಪಡೆದುಕೊಳ್ಳಬೇಕು, ಇಲ್ಲವಾದರೆ ಮುಂದಿನ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಇದಕ್ಕೂ ಪೂರ್ವದಲ್ಲಿ ಮಾತನಾಡಿದ ಮರ್ಚೆಂಟ್ ಅಸೋಸಿಯೇಶನ್ನ ಪ್ರಮುಖ ಮೊತೇಶಮ್ ಸೈಬ್, ಅಂಗಡಿಕಾರರು ಹಾಗೂ ಕಟ್ಟಡ ಮಾಲೀಕರನ್ನು ಬೇರೆ ಬೇರೆಯಾಗಿ ನೋಡಬೇಕು, ಬಹಳಷ್ಟು ಕಟ್ಟಡ ಮಾಲೀಕರು ಊರಿನ ಹೊರಗೆ ಇದ್ದಾರೆ, ಅಂಗಡಿಕಾರರ ಸಮಸ್ಯೆ ಬೇರೆ ತೆರನಾಗಿದೆ. ಕೋವಿಡ್ ಕಾರಣದಿಂದಾಗಿ ಅಂಗಡಿಯ ಬಾಡಿಗೆ ಹಣವನ್ನು ಪಾವತಿಸಲು ಅಂಗಡಿಕಾರರಿಗೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸರ್ಕಾರಕ್ಕೂ ಗೊತ್ತಿದೆ. ವಾಸ್ತವವನ್ನು ಅರಿತಿರುವ ಹಿರಿಯ ಅಧಿಕಾರಿಗಳಾಗಿರುವ ತಾವು ಏಕಾಏಕಿಯಾಗಿ ಅಂಗಡಿಗಳಿಗೆ ತೆರಳಿ ಬಾಗಿಲು ಮುಚ್ಚಿಸಲು ಯತ್ನಿಸಿದ್ದು ಬೇಸರ ತಂದಿದೆ, ವ್ಯಾಪಾರ ಪರವಾನಿಗೆ ಪತ್ರದ ವಿಷಯದಲ್ಲಿ ಮರ್ಚೆಂಟ್ ಅಸೋಶಿಯೇಶನ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಬೇಕು ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಭಟ್ಕಳ ಪುರಸಭಾ ಮುಖ್ಯಾಧಿಕಾರಿ ದೇವರಾಜು, ಎಸೈ ಭರತ್, ಹಿರಿಯ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್, ಮರ್ಚಂಟ್ ಅಸೋಶಿಯೇಶನ್ನಿನ ಸಿದ್ದಿಕ್ ಇಸ್ಮೈಲ್, ಮಂಜುನಾಥ ಪ್ರಭು, ಪುರಸಭಾ ಸದಸ್ಯ ರವೂಫ್ ನಾಯಿತೇ ಮೊದಲಾದವರು ಉಪಸ್ಥಿತರಿದ್ದರು.