ಕಾರವಾರ (ಉ.ಕ): ಇಲ್ಲಿನ ಪುರಾಣ ಪ್ರಸಿದ್ಧ ಕವಳೇಶ್ವರ ಗುಹೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿದ್ದ ಸೇತುವೆ ಮಳೆಯಿಂದಾಗಿ ಕೊಚ್ಚಿಹೋಗಿದ್ದು ಭಕ್ತಾದಿಗಳು ದೇವರ ದರ್ಶನಕ್ಕೆ ಹರಸಾಹಸಪಟ್ಟು ಹಳ್ಳ ದಾಟುತ್ತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನ ಅಂಬಿಕಾನಗರ ಬಳಿಯ ಕವಳೇಶ್ವರ ಗುಹೆ ಸಂಪರ್ಕಿಸುವ ಸೇತುವೆ ಕೊಚ್ಚಿಹೋಗಿ ಭಕ್ತರು ತುಂಬಿ ಹರಿಯುವ ಹಳ್ಳದ ಮೇಲೆ ಕಾಲುಸಂಕದಲ್ಲಿಯೇ ಶಿವನ ಸನ್ನಿದಾನ ತಲುಪಬೇಕಾಗಿದೆ.
ಕವಳೇಶ್ವರ ನೈಸರ್ಗಿಕವಾಗಿ ನಿರ್ಮಾಣವಾಗಿರುವ ಶಿವನ ದೇವಸ್ಥಾನ ಎನ್ನುವ ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ಅಲ್ಲದೇ ಈ ಹಿಂದೆ ಪಾಂಡವರು ಬಂದು ಪೂಜೆ ಸಲ್ಲಿಸುತ್ತಿದ್ದರು ಎನ್ನುವ ಪ್ರತೀತಿಯೂ ಇದ್ದು, ಶಿವರಾತ್ರಿ ಸಂದರ್ಭದಲ್ಲಿ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.