ಕಾರವಾರ(ಉತ್ತರ ಕನ್ನಡ):ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ಪ್ರತಿಯೊಂದು ಕೆಲಸಕ್ಕೂ ಲಂಚಕೊಡಬೇಕು ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇತ್ತ, ಜಿಲ್ಲೆಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನವೇ ಅಬಕಾರಿ ಇಲಾಖೆ ಅಧಿಕಾರಿ ಭ್ರಷ್ಟಾಚಾರ ಆರೋಪದಡಿ ಸಿಕ್ಕಿಬಿದ್ದಿದ್ದಾರೆ. 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಪ್ರೊಬೇಷನರಿ ಅಬಕಾರಿ ನಿರೀಕ್ಷಕಿಯನ್ನು ವಶಕ್ಕೆ ಪಡೆದಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ.
ಕುಮಟಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೊಬೇಷನರಿ ಅಬಕಾರಿ ನಿರೀಕ್ಷಕಿ ವಿಜಯಪುರ ಮೂಲದ ಪ್ರೀತಿ ರಾಥೋಡ್ ಅವರನ್ನು ಅಂಕೋಲಾದ ಅಬಕಾರಿ ಇಲಾಖೆಗೆ ಪ್ರಭಾರ ಅಬಕಾರಿ ನಿರೀಕ್ಷಕಿಯಾಗಿ ಇತ್ತೀಚಿಗೆ ನೇಮಕ ಮಾಡಲಾಗಿತ್ತು. ಕಾರವಾರದ ಕೋಡಿಭಾಗದ ಮುಸ್ತಾಕ್ ಹಸನ್ ಎನ್ನುವವರು ಕಳೆದ ಕೆಲ ದಿನಗಳ ಹಿಂದೆ ಕುಮಟಾಗೆ ತೆರಳುವಾಗ ಬೈಕ್ ನಲ್ಲಿ ಮದ್ಯ ಸಾಗಿಸುತ್ತಿದ್ದರು ಎನ್ನಲಾಗ್ತಿದೆ. ಬಳಿಕ ಬೈಕ್ ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿತ್ತು.