ಕಾರವಾರ:ಬಟ್ಟೆಗಳನ್ನೇ ಧರ್ಮವೆಂದು ತಿಳಿದು ತಮಗೆ ಅನುಕೂಲವಾಗುವಂತಹ ಸಿದ್ಧಾಂತಗಳ ಮೇಲೆ ವಾದಗಳನ್ನು ಮಂಡಿಸಲಾಗುತ್ತಿದೆ. ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸದಿದ್ದರೆ ದೇಶಪ್ರೇಮ ಏನಾಗಲಿದೆ ಎಂಬ ಬಗ್ಗೆ ಭಯವಾಗುತ್ತಿದೆ ಎಂದು ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಹೊನ್ನಾವರದಲ್ಲಿ ಮಾತನಾಡಿದ ಅವರು, ಧರ್ಮದ ನಿಟ್ಟಿನಲ್ಲಿ ಶಾಲೆಯ ಮಕ್ಕಳು ಕೇಸರಿ ಶಾಲು, ಟೋಪಿ, ಹಿಜಾಬ್‌ಗಳನ್ನು ಹಾಕಿಕೊಂಡು ಬಂದು ವಿವಾದ ಸೃಷ್ಟಿಯಾಗಿದೆ. ಹಾಗಿದ್ದರೆ ಧರ್ಮವೆಂದರೇನು? ಟೋಪಿ, ಮುಖವಾಡ, ಕೇಸರಿ ಶಾಲು ಇವು ಧರ್ಮವಲ್ಲ. ಧರ್ಮವೆಂದರೆ ಬದುಕಿನ ನಿಯಮ. ಸನ್ಯಾಸವೆಂದರೆ ಕೇಸರಿ ಬಟ್ಟೆಯೊಂದೇ ಅಲ್ಲ. ನಮಗೆ ನಾವೇ ಹಾಕಿಕೊಳ್ಳುವ ಕಟ್ಟುಪಾಡು ಎಂದು ಹೇಳಿದರು. ಕೇಸರಿ ಹಾಕಿದ ಮೇಲೆ ಯಾರ ಮನೆಗೂ ಹೋಗುವಂತಿಲ್ಲ, ಮಾರ್ಗದಲ್ಲಿ ನಿಂತು ತಿನ್ನುವಂತಿಲ್ಲ. ಧರ್ಮಕ್ಕೆ ವಿರುದ್ಧವಾದ ವಿಚಾರಗಳನ್ನೂ ಮಾಡುವಂತಿಲ್ಲ ಇಂತಹ ನೈತಿಕತೆಯ ಮಟ್ಟ ಹೆಚ್ಚಿಸುವುದೇ ಧರ್ಮ ಎಂದು ಹೇಳಿದರು.