ಕಾರವಾರ (ಉತ್ತರಕನ್ನಡ): ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಜೈಲುವಾಸ ಅನುಭವಿಸಿದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್. ಇಂತಹ ಸಾವರ್ಕರ್ ಹಾಗೂ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಟೀಕಿಸಿದ್ದಾರೆ.
ಮುರುಡೇಶ್ವರದಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಂಬೇಡ್ಕರ ಹೆಸರಿನಲ್ಲಿ ಅಧಿಕಾರವನ್ನು ಪಡೆದು ಕೊನೆಗೆ ಅವರಿಗೆ ಚುನಾವಣೆ ನಿಲ್ಲಲು ಅವಕಾಶ ನೀಡಲಿಲ್ಲ. ಮಾತ್ರವಲ್ಲದೆ ಅವರು ಮೃತರಾದ ಸಂದರ್ಭದಲ್ಲಿ ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೂ ಸೂಕ್ತ ಬೆಂಬಲ ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕಾಲದಲ್ಲಿ ಬಾಂಬ್ ತಯಾರಿಕೆ ಕಾರ್ಖಾನೆ : ಕುಟುಂಬದ ಯಾರೋ ಒಬ್ಬ ಸ್ವಾತಂತ್ರ್ಯ ಹೋರಾಟ ಮಾಡಿದ್ದನ್ನೇ ಇಂದಿಗೂ ಕಾಂಗ್ರೆಸ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಈಗ ಇಲ್ಲ. ಕಾಂಗ್ರೆಸ್ ಕಾಲದಲ್ಲಿ ಕೇವಲ ಬಾಂಬ್ ತಯಾರಿಕೆ ಕಾರ್ಖಾನೆಗಳು ಮಾತ್ರ ಸ್ಥಾಪನೆಯಾದವು. ಇದೇ ಕಾರಣಕ್ಕೆ ಭಯೋತ್ಪಾದನೆಗೆ ಬೆಂಬಲ ನೀಡುವ ಕೆಲಸ ಕಾಂಗ್ರೆಸ್ ಅವಧಿಯಲ್ಲಿ ಆಗಿದೆ ಎಂದು ಹೇಳಿದರು.