ಕಾರವಾರ(ಉತ್ತರ ಕನ್ನಡ):ಸೇತುವೆ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸದೆ ಹಾಗೆ ಬಿಟ್ಟ ಕಾರಣ ಜನರು ಸಂಚರಿಸುತ್ತಿದ್ದ ಯಾಂತ್ರೀಕೃತ ದೋಣಿ ಮಣ್ಣಿಗೆ ಸಿಲುಕಿ, ನದಿ ಮಧ್ಯೆ ನಿಂತು ಕೆಲಕಾಲ ಆತಂಕ ಸೃಷ್ಟಿದ ಘಟನೆ ಅಂಕೋಲಾ ತಾಲೂಕಿನ ಮಂಜಗುಣಿ ಬಳಿ ಗಂಗಾವಳಿ ನದಿಯಲ್ಲಿ ನಡೆದಿದೆ.
ಗಂಗಾವಳಿ ನದಿ ದಾಟುವಾಗ ನದಿಗೆ ಹಾಕಲಾಗಿದ್ದ ಮಣ್ಣಿನಲ್ಲಿ ದೋಣಿ ಸಿಲುಕಿಕೊಂಡಿದ್ದು, ದೋಣಿ ಹತ್ತಿದ್ದ 20 ಜನರು ಕೆಲಕಾಲ ಆತಂಕಕ್ಕೊಳಗಾಗಿದ್ದರು. ತುಂಬಿ ಹರಿಯುತ್ತಿದ್ದ ನದಿಯಲ್ಲಿ ದೋಣಿ ಹಿಂದೆಯೂ ಚಲಿಸದೆ ಮುಂದೆಯೂ ಹೋಗದೆ ನಿಂತಿದ್ದಾಗ ಇದನ್ನು ಕಂಡ ಸ್ಥಳೀಯರು ಮತ್ತೊಂದು ದೋಣಿಯ ಸಹಾಯದಿಂದ ಹಗ್ಗ ಕಟ್ಟಿ ಎಳೆದು ದಡಕ್ಕೆ ತಂದು 20 ಜನರ ರಕ್ಷಣೆ ಮಾಡಿದ್ದಾರೆ. ಸೇತುವೆ ಫಿಲ್ಲರ್ ಮಾಡುವಾಗ ಮಣ್ಣನ್ನು ಹಾಗೇ ಬಿಟ್ಟಿದ್ದರಿಂದ ಹೀಗಾಗಿದೆ. ಕೂಡಲೇ ನದಿಗೆ ಹಾಕಲಾದ ಸಾವಿರಾರು ಲೋಡ್ ಮಣ್ಣನ್ನು ತೆರವುಗೊಳಿಸಬೇಕು. ಜೊತೆಗೆ ಸೇತುವೆ ಕಾಮಗಾರಿಯು ಆದಷ್ಟು ಬೇಗ ಮುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.