ಕಾರವಾರ: ವಿಶಾಲ ಕಡಲತೀರ, ಹಚ್ಚ ಹಸಿರಿನ ಸ್ವಚ್ಛ ಪರಿಸರ ಹಾಗೂ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಇಕೋ ಬೀಚ್ಗೆ ಬ್ಲ್ಯೂ ಫ್ಲಾಗ್ ಬೀಚ್ ಎಂಬ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದೆ.
ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಶ್ರಮದಿಂದಾಗಿ ಕಾಸರಕೋಡಿನಲ್ಲಿರುವ ಇಕೋ ಬೀಚ್ ಇದೀಗ ಅಂತಾರಾಷ್ಟ್ರೀಯ ಮಟ್ಟದ ಬೀಚ್ ಆಗಿ ಮೇಲ್ದರ್ಜೆಗೇರಿದೆ. ಡೆನ್ಮಾರ್ಕ್‌ನ ಪರಿಸರ ಶಿಕ್ಷಣ ಪ್ರತಿಷ್ಠಾನ ಪರಿಶೀಲನೆ ಬಳಿಕ ಬ್ಲ್ಯೂ ಫ್ಲಾಗ್ ಪ್ರಮಾಣಪತ್ರ ನೀಡಿದೆ.
ಕಡಲತೀರದಲ್ಲಿನ ಅಭಿವೃದ್ಧಿ ಕಾರ್ಯಗಳು ಹಾಗೂ ಬೀಚ್ ಸ್ಥಿತಿಯನ್ನು ಆಧರಿಸಿ ಬ್ಲ್ಯೂ ಫ್ಲಾಗ್ ಪ್ರಮಾಣಪತ್ರ ನೀಡಲಾಗಿದೆ. ಕಡಲ ತೀರದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸನದಿಂದ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲ ತೀರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಸಿಬ್ಬಂದಿ ಒಳಗೊಂಡು ವಿನೂತನ ಮಾದರಿಯ ವ್ಯವಸ್ಥೆ ಒದಗಿಸಲಾಗಿದೆ.
ರಾಜ್ಯದಲ್ಲಿ ಎರಡು ಬೀಚ್ಗಳು ಮಾತ್ರ ಈ ಬ್ಲ್ಯೂ ಪ್ಲ್ಯಾಗ್ ಮಾನ್ಯತೆಯನ್ನು ಪಡೆದುಕೊಂಡಿದ್ದು, ಇನ್ನೊಂದು ಉಡುಪಿಯ ಪಡುಬಿದ್ರೆ ಬೀಚ್ ಆಯ್ಕೆಯಾಗಿದೆ. ಬೀಚ್ನಲ್ಲಿ ಸ್ವಚ್ಛತೆ ಜತೆಗೆ ಮೂಲಭೂತ ಸೌಕರ್ಯ ಇರುವುದರಿಂದ ಸಾಕಷ್ಟು ಪ್ರವಾಸಿಗರನ್ನ ಆಕರ್ಷಿಸಲು ಅನುಕೂಲವಾಗಲಿದೆ. ಮಾತ್ರವಲ್ಲದೆ ಈ ಬೀಚ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರಿಂದ ದೇಶ, ವಿದೇಶಗಳ ಪ್ರವಾಸಿಗರನ್ನೂ ಇತ್ತ ಸೆಳೆಯಲಿದೆ. ಕಡಲ ತೀರವು 5.6 ಕಿಲೋ ಮೀಟರ್ ಉದ್ದವಿದ್ದು, 750 ಮೀಟರ್ ವ್ಯಾಪ್ತಿ ಹೊಂದಿದೆ. ಸದ್ಯ ಸುಮಾರು 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.