ಭಟ್ಕಳ: ಸರ್ಕಾರ ಲಾಕ್ಡೌನ್ ಸಮಯದಲ್ಲಿ ಗ್ರಾಹಕರಿಗೆ ಅತ್ಯಧಿಕ ವಿದ್ಯುತ್ ಬಿಲ್ ವಿಧಿಸುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯಕ್ ಆರೋಪಿಸಿದರು.
ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗ್ರಾಹಕರಿಗೆ ಹೆಸ್ಕಾಂನಿಂದ ಅಧಿಕ ಬಿಲ್ ಬಂದಿರುವ ಕುರಿತು ಹೆಸ್ಕಾಂ ಅಧಿಕಾರಿಗಳು ತಕ್ಷಣ ಬಿಲ್ಗಳನ್ನು ಪರಿಶೀಲಿಸಬೇಕು ಮತ್ತು ಈಗಾಗಲೇ ವಿಧಿಸಿದ ಹೆಚ್ಚುವರಿ ಹಣವನ್ನು ಅವರ ಖಾತೆಗೆ ಜಮಾ ಮಾಡಬೇಕೆಂದು ಆಗ್ರಹಿಸಿದರು.
ನಂತರ ಮಾತನಾಡಿ, ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಹಿಂದೆ ಇದ್ದ ಉಳುವವನೇ ಭೂ ಒಡೆಯ ಎನ್ನುವ ಬದಲು ಕೊಳ್ಳುವವರಿಗೆ ಭೂಮಿಯ ಒಡೆತನ ಎನ್ನುವಂತೆ ಬದಲಾಯಿಸಲು ಹೊರಟಿದೆ .ಇದು ಜಾರಿಯಾದರೆ ಭೂ ಒಡೆತನವೂ ಕಾರ್ಪೊರೇಟರ್ ಸಂಸ್ಥೆಗಳ ಕೈಯಲ್ಲಿ, ಉಳ್ಳವರ ಕೈಯಲ್ಲಿ ಹೋಗಲಿದ್ದು ಇದರ ಕುರಿತು ತಮ್ಮ ಪಕ್ಷ ಈಗಾಗಲೇ ಹೋರಾಟ ಆರಂಭಿಸಿದೆ ಎಂದರು .
ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಇಳಿದಿದ್ದರೂ ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿ ಜನರಿಗೆ ಗಾಯದ ಮೇಲೆ ಬರೆ ಎಳೆದಿದೆ .ಕೇಂದ್ರ ಸರ್ಕಾರ ಲಾಕ್ ಡೌನ್ ಸಂದರ್ಭದಲ್ಲಿ ಘೋಷಿಸಿದ 20 ಲಕ್ಷ ಕೋಟಿ ರೂ ಹಣ ಪರಿಹಾರ ಜನರಿಗೆ ಪ್ರಾಮಾಣಿಕವಾಗಿ ತಲುಪುವಂತಾಗಬೇಕು. ರಾಜ್ಯದಲ್ಲಿ ಗರ್ಭಿಣಿಯರಿಗೆ ನೀಡುತ್ತಿದ್ದ 6 ಸಾವಿರ ರೂಪಾಯಿ ಸಹಾಯಧನ ಸ್ಥಗಿತಗೊಳಿಸಲಾಗಿದ್ದು ಕೂಡಲೇ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಅಲ್ಲದೇ, ಆಟೋ ಟ್ಯಾಕ್ಸಿ ಚಾಲಕರಿಗೆ ಶೀಘ್ರವೇ ಐದು ಸಾವಿರ ರೂಪಾಯಿ ಪರಿಹಾರ ಧನವನ್ನು ಅವರ ಖಾತೆಗೆ ಜಮಾ ಮಾಡಬೇಕು. ಖಾಸಗಿ ಶಾಲೆ ಶಿಕ್ಷಕರು ತೀವ್ರ ಸಂಕಷ್ಟದಲ್ಲಿದ್ದು, ಅವರಿಗೂ ಸಹ ಸರ್ಕಾರ ಮಾನವೀಯ ನೆಲೆಯಲ್ಲಿ ಪರಿಹಾರ ಘೋಷಣೆ ಮಾಡಿ ನೆರವಿಗೆ ಧಾವಿಸಬೇಕು. ಹಾಗೆಯೇ ಮೀನುಗಾರರು ಸಹ ತೀವ್ರ ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ 60 ಕೋಟಿ ಸಾಲ ಮನ್ನಾ ಮಾಡಿರುವುದರಿಂದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಮೀನುಗಾರರಿಗೆ ಅನುಕೂಲಕರವಾಗಿದೆ ಹೊರತು ಉತ್ತರ ಕನ್ನಡದಲ್ಲಿ ಸಾಲ ಮನ್ನಾದಿಂದ ಹೆಚ್ಚಿನ ಲಾಭ ಆಗಿಲ್ಲ ಎಂದರು.