ಶಿರಸಿ:ಬಿ.ಎಸ್.ಯಡಿಯೂರಪ್ಪ ಡಿ.5ರವರೆಗೆ ಮಾತ್ರ ಮುಖ್ಯಮಂತ್ರಿ ಆಗಿರುತ್ತಾರೆ. ಅಲ್ಲಿಯವರೆಗೆ ಏನೇನು ಕನಸಿದೆಯೋ ಅದನ್ನು ನನಸು ಮಾಡಿಕೊಂಡರೆ ಬಹಳ ಒಳ್ಳೆಯದು ಎಂದು ರಾಜ್ಯಸಭಾ ಸದಸ್ಯ, ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ತಮ್ಮ ಬಳಿ ಸಂಖ್ಯಾಬಲವಿದೆ ಎಂದು ಹೇಳಿ ಕಳೆದ ಬಾರಿ ಬಿದ್ದರು. ಮಹಾರಾಷ್ಟ್ರದಲ್ಲಿ ಫಡ್ನವೀಸ್ಗೂ ಅದೇ ಆಯಿತು. ಕರ್ನಾಟಕದಲ್ಲಿಯೂ ಉಪ ಚುನಾವಣೆ ನಂತರ ಸರ್ಕಾರ ಇರುವುದಿಲ್ಲ ಎಂದರು.
ಮತ್ತೆ ಮೈತ್ರಿ ಕುರಿತು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಶರದ್ ಪವಾರ್ರಂತೆ ದೇವೇಗೌಡರು ಹಿರಿಯರು. ಬಿಜೆಪಿಯಂತಹ ಶಕ್ತಿ ಬದಿಗಿಡಲು ಅವರು ಮುತುವರ್ಜಿ ವಹಿಸಿದರೆ ಉತ್ತಮ. ಸಿದ್ದರಾಮಯ್ಯರನ್ನ ಸೈಡ್ಲೈನ್ ಮಾಡಲಾಗುತ್ತಿದೆ ಎಂಬ ವಿಷಯ ಕುರಿತು ಪತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷ. ಸೈಡ್ಲೈನ್ ಮಾಡುವುದು, ತಲೆ ಮೇಲೆ ಕೂಡಿಸುವುದು ಮಾಡಲ್ಲ ಎಂದಿದ್ದಾರೆ.
ಇನ್ನು ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂಬ ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಮಾನ ಮರ್ಯಾದೆ ಇದ್ದಿದ್ದರೆ ಮಾನನಷ್ಟ ಮೊಕದ್ದೆಮೆ ಹಾಕುತ್ತಿದ್ದರು. ಆದರೆ, ಅದಿಲ್ಲದವರ ಜೊತೆ ಏನು ಮಾತನಾಡುವುದು? ಈ ಹಿಂದೆ 14 ಜನ ಕಾಂಗ್ರೆಸ್ ಶಾಸಕರನ್ನು ಪ್ರಾಣಿಗಳಂತೆ ಖರೀದಿಸಿದಾಗ ಮಾನ ಮರ್ಯಾದೆ ಇರಲಿಲ್ಲವೆ? ಮಾನ ಮರ್ಯಾದೆ ಇರುವುವವರು ಯಾರೂ ಮನುಷ್ಯರನ್ನು ಖರೀದಿ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.