ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಾರವಾರ:ಭಯೋತ್ಪಾದಕರಿಗೆ ಬೆಂಬಲ ಕೊಡುವಂತಹ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ. ಇಂತಹ ಪಕ್ಷ ಕಾಂಗ್ರೆಸ್‌ಗೆ ಸರ್ಟಿಫಿಕೇಟ್ ಕೊಡುವುದು ಬೇಕಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದರು. ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಮಂಗಳೂರು ಕುಕ್ಕರ್ ಬ್ಲ್ಯಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಗೂ ಮೊದಲೇ ಭಯೋತ್ಪಾದಕ ಕೃತ್ಯ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಯಾವ ತನಿಖೆ ಆಧರಿಸಿ ಇದನ್ನು ಭಯೋತ್ಪಾದಕ ಕೃತ್ಯ ಎಂದರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿದ್ದಾರೆ. ಈ ಪ್ರಶ್ನೆ ಬಹುತೇಕ ಜನರಲ್ಲಿಯೂ ಇದೆ ಎಂದರು.
ಜಿಲ್ಲೆಯ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಾಲಯ ಇಲ್ಲದ ವಿಚಾರವಾಗಿ ಪ್ರತಿಕ್ರಿಯಿಸಿ, ನಾವೂ 40 ಪರ್ಸೆಂಟ್ ಕಮಿಷನ್ ಹೊಡೆದಿದ್ದರೆ ಎಲ್ಲೆಡೆ ನಮ್ಮ ಕಚೇರಿ ಇರುತ್ತಿತ್ತು. ಈ ಚರ್ಚೆ ದಿಕ್ಕು ತಪ್ಪಿಸಲು ಕುಕ್ಕರ್ ಬ್ಲ್ಯಾಸ್ಟ್, ಓಟರ್ಸ್ ಹಗರಣ ತಂದರು. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆದರೆ ನಿಮ್ಮದು ಡಬ್ಬಲ್ ಎಂಜಿನ್ ಸರ್ಕಾರವಾಗಿರುವ ಕಾರಣ ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದರು.
ಉಗ್ರವಾದಿಗಳನ್ನು ಸಾಕುತ್ತಿರುವುದು ಬಿಜೆಪಿಯವರು. ಗಡಿ, ರಾಷ್ಟ್ರ ಬಿಜೆಪಿಯವರ ಪಿತ್ರಾರ್ಜಿತ ಆಸ್ತಿಯಲ್ಲ. ಮಹಾರಾಷ್ಟ್ರದೊಂದಿಗಿನ ಗಡಿ ವಿಚಾರದಲ್ಲಿ ಡಬ್ಬಲ್ ಎಂಜಿನ್ ಸರ್ಕಾರದಲ್ಲಿ ವಿವಾದ ಬಗೆಹರಿಸುವ ಕೆಲಸವಾಗುತ್ತಿಲ್ಲ. ಸರ್ವಪಕ್ಷ ಸಭೆ ಕರೆಯದೇ ಗೃಹಸಚಿವರು ಮಾತ್ರ ಚರ್ಚೆ ಮಾಡಿದ್ದಾರೆ. ಯಾವುದೇ ವಿಚಾರ ಬಂದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದೊಂದೇ ಬಿಜೆಪಿ ಕೆಲಸ. ಆದರೆ ಬಿಜೆಪಿ ಏನು ಮಾಡಿದೆ ಅನ್ನೋದನ್ನು ಹೇಳುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಬಿಜೆಪಿ ನಿರ್ಲಕ್ಷದಿಂದ ಓಬಿಸಿ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ: ಸಿದ್ದರಾಮಯ್ಯ