ಕಾರವಾರ : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕಾರವಾರ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ, ಜೆಡಿಎಸ್ ಹಾಗೂ ಪಕ್ಷೇತರರ ಬೆಂಬಲ ಪಡೆದುಕೊಂಡಿದ್ದ ಬಿಜೆಪಿ ಕೊನೆಗೂ ಗದ್ದುಗೆ ಏರಿದ್ದು, ಬಿಜೆಪಿಯ ಡಾ.ನಿತಿನ್ ಪಿಕಳೆ ಅಧ್ಯಕ್ಷರಾಗಿ ಹಾಗೂ ಪ್ರಕಾಶ್ ನಾಯ್ಕ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜೆಡಿಎಸ್, ಪಕ್ಷೇತರರ ಬೆಂಬಲದೊಂದಿಗೆ ಕಾರವಾರ ನಗರಸಭೆಯ ಗದ್ದುಗೆ ಹಿಡಿದ ಬಿಜೆಪಿ - ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ
4 ಜೆಡಿಎಸ್ 5 ಪಕ್ಷೇತರ ಸದಸ್ಯರ ಬೆಂಬಲದಿಂದ ಒಟ್ಟು 21 ಸದಸ್ಯರ ಬಲದೊಂದಿಗೆ ಕಾರವಾರ ನಗರಸಭೆಯ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ನಗರದ ಕನ್ನಡ ಭವನದಲ್ಲಿ ಇಂದು ಚುನಾವಣೆ ನಡೆಯಿತು. ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಅಧಿಕಾರ ಪಡೆಯಲು 16 ಸಂಖ್ಯಾಬಲದ ಅಗತ್ಯತೆ ಇತ್ತು. ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ತಲಾ 11, ಜೆಡಿಎಸ್ನಿಂದ 4 ಹಾಗೂ 5 ಮಂದಿ ಪಕ್ಷೇತರರು ಚುನಾಯಿತರಾಗಿದ್ದರು. ಈ ಪೈಕಿ ಜೆಡಿಎಸ್‌ನ 4 ಹಾಗೂ 5 ಮಂದಿ ಪಕ್ಷೇತರ ಸದಸ್ಯರು ಬಿಜೆಪಿಗೆ ಬಾಹ್ಯ ಬೆಂಬಲ ವ್ಯಕ್ತಪಡಿಸಿದ್ದು, ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಸೇರಿ ಒಟ್ಟೂ 21 ಮಂದಿಯ ಬಲದೊಂದಿಗೆ ಬಿಜೆಪಿ ಅಧಿಕಾರ ವಹಿಸಿಕೊಂಡಿದೆ.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಳಿಕ ಶಾಸಕಿ ರೂಪಾಲಿ ನಾಯ್ಕ ಹಾಗೂ ಬೆಂಬಲಿಗರು ನೂತನವಾಗಿ ಅಧಿಕಾರ ವಹಿಸಿಕೊಂಡ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಿದರು. ಎರಡು ಬಾರಿ ಸದಸ್ಯನಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ ನಿತಿನ್ ಪಿಕಳೆ ಅಧ್ಯಕ್ಷ ಸ್ಥಾನ ಲಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಕಾರವಾರ ನಗರಸಭೆಯನ್ನ ಮಾದರಿ ನಗರಸಭೆಯನ್ನಾಗಿ ಮಾಡುವ ಗುರಿಯನ್ನ ಹೊಂದಿರುವುದಾಗಿ ತಿಳಿಸಿದರು.