ಕಾರವಾರ: ಭಯೋತ್ಪಾದನಾ ಚಟುವಟಿಕೆಗೆ ಕಾಂಗ್ರೆಸ್ ಬೆಂಬಲವಾಗಿ ನಿಂತು ರಕ್ಷಿಸಿದ್ದು, ಅವರ ಅವಧಿಯಲ್ಲಿ ಹೆಚ್ಚು ಮತೀಯ ಗಲಭೆ ಪ್ರಕರಣಗಳು ನಡೆದಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತಕ್ಕೆ ಬಂದಾಗಲೆಲ್ಲ ಮತೀಯ ಗಲಭೆಗಳಿಗೆ ಪ್ರಚೋದನೆ ಕೊಟ್ಟಿದೆ. ಅವರ ತುಷ್ಟೀಕರಣ ನೀತಿಯಿಂದಾಗಿ ಅವರ ಅಧಿಕಾರಾವಧಿಯಲ್ಲಿ ಮತೀಯ ಗಲಭೆಗಳು ಹೆಚ್ಚಾಗಿತ್ತು ಎಂದರು.
ಪಿಎಫ್ಐನ ಎರಡು ಸಾವಿರ ಕಾರ್ಯಕರ್ತರನ್ನು ಸಿದ್ರಾಮಣ್ಣ ಬಿಡುಗಡೆಗೊಳಿಸಿದರು. ಅವರ ಕಾಲದಲ್ಲಿಯೇ ಅತಿ ಹೆಚ್ಚು ಹಿಂದೂಗಳ ಹತ್ಯೆಯಾಗಿದೆ. ಆದರೆ ಯಾರೊಬ್ಬರ ಮನೆಗೂ ಹೋಗದ ಅವರು ಶೃಂಗೇರಿಯಲ್ಲಿ ಗೋಹಂತಕನೊಬ್ಬನ ಎನ್ಕೌಂಟರ್ ಆದಾಗ ಅವರ ಮನೆಗೆ ಹೋಗಿ 10 ಲಕ್ಷ ರೂ ಕೊಟ್ಟಿದ್ದರು. ಆ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಮತೀಯ ಗಲಭೆಗಳಿಗೆ ಅವಕಾಶ ಮಾಡಿಕೊಟ್ಟರು. ಮತೀಯ ಗಲಭೆಗಳನ್ನು ಸೃಷ್ಟಿಸಿ ಅಧಿಕಾರ ಪಡೆದಿರುವುದು ಕಾಂಗ್ರೆಸ್ನ ಇತಿಹಾಸ ಎಂದು ಹೇಳಿದರು.
ಮಂಗಳೂರಿನ ಕುಕ್ಕರ್ ಬ್ಲಾಸ್ಟ್ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ನವರು ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತವರು. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲಿ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದರು. ಇವತ್ತಿಗೂ ಕಾಂಗ್ರೆಸ್ ಅವರನ್ನು ಉಚ್ಛಾಟನೆ ಮಾಡಿಲ್ಲ. ಪಿಎಫ್ಐ, ಕೆಎಫ್ಡಿಯನ್ನ ನಿಷೇಧ ಮಾಡಿದರೂ ಪ್ರಶ್ನಿಸುತ್ತಾರೆ. ಇವರದೇ ಶಾಸಕನ ಮೇಲೆ ಚೂರಿ ಇರಿತವಾಗಿತ್ತು ಎಂದು ಹೇಳಿದರು.